ದೇವರಿಗಿಂತ ಗುರು ದೊಡ್ಡವರು ಎನ್ನುವರು. ನಿರಾಕಾರ ದೇವರು ಸಾಕಾರ ಗುರುವಿನ ಮೂಲಕ ಕೆಲಸ ಮಾಡಿಸುವಾಗ ಗುರು ಒಲಿದರೆ ಜ್ಞಾನ ಮುನಿದರೆ ಅಜ್ಞಾನ.
ದತ್ತಾತ್ರೇಯ ಅವತಾರ :-
'ಅನುಸೂಯ' ಎಂದರೆ “ಅಸೂಯೆ” ಇಲ್ಲದವಳು. ಇದು ಎಲ್ಲಿ ಇರುವುದಿಲ್ಲವೋ ಅದೇ “ಅತ್ರಿ”. ಹಾಗೆಯೇ ಮೂರು ವಿಚಾರಗಳಾದ, ಜಾಗೃತ್ -ಸ್ವಪ್ನ - ಸುಷುಪ್ತಿ, ಮತ್ತು ಬಾಲ್ಯ -ಯೌವನ -ಜರಾ, ಹಾಗೆ ಸತ್ವ- ರಜ -ತಮ ಗುಣಗಳಂಥ ಅವಸ್ಥೆಗಳನ್ನು ಹಾಗೂ ಕರ್ತೃ -ಕರ್ಮ- ಕರಣ ಇವುಗಳನ್ನು ಮೀರಿದವನು, ಕಾಮ, ಕ್ರೋಧ, ಲೋಭ ಎಂಬ ಇಂದ್ರಿಯ ಗಳನ್ನು ಜಯಿಸಿದವರು,'ಅತ್ರಿ'ಆಗುತ್ತಾರೆ. ಇವರ ಆತ್ಮದಲ್ಲಿ ಭಗವಂತ ನೆಲೆಸುತ್ತಾನೆ. ಈ ಎಲ್ಲವನ್ನೂ ಮೀರಿದ “ಅತ್ರಿ”
ಗಳನ್ನು ಯಾವುದೇ ಮನುಷ್ಯ ಶ್ರದ್ಧೆ- ಭಕ್ತಿಯಿಂದ ಆರಾಧಿ ಸುತ್ತಾನೋ, ಪೂಜಿಸುತ್ತಾರೋ ಅವರ ತಾಪತ್ರಯಗಳು ನೀಗುತ್ತದೆ. ಅದಿ ಭೌತಿಕ -ಅದಿ ದೈವಿಕ- ಆಧ್ಯಾತ್ಮಿಕ ಎಂಬ ಮೂರು ವಿಧದ ತಾಪತ್ರಯಗಳು ಅಂದರೆ ದೇಹಕ್ಕೆ ಬರುವ ರೋಗರುಜನಿಗಳು, ದೈವಾನುಗ್ರಹ ಇಲ್ಲದವರಿಗೆ ಬರುವಂತ ಹದು, ಹಾಗೂ ಒಂದು ತರ ಪ್ರಾರಬ್ಧ ಕರ್ಮಗಳು, ಪೂರ್ವ ಜನ್ಮದಲ್ಲಿ ಮಾಡಿದ ಸಂಚಿತ ಪಾಪ ಅಂದರೆ ಉಳಿದ ಪಾಪಗಳನ್ನು ತುಂಬಿಸಿಟ್ಟ ಚೀಲ ಸಂಚಿತ ಪಾಪದ ಗಂಟು. ಇಂಥ ಪಾಪ ಗಳಿಂದ ಮುಕ್ತರಾಗ ಬೇಕು ಎಂದರೆ ಎಲ್ಲವನ್ನು ಮೀರಿದ ಅತ್ರಿ ಮಹರ್ಷಿಗಳನ್ನು ಪೂಜಿಸುವ ಮೂಲಕ ಪಾಪ ಕರ್ಮಗಳು ಕಳೆಯುತ್ತವೆ.
ಅತ್ರಿ ಮಹರ್ಷಿ, ಇವರು ತಮ್ಮ ತಪಸ್ಸು, ಧ್ಯಾನ, ಸತ್ಯ, ನಿಷ್ಠೆ,
ತಾಳ್ಮೆ, ಶ್ರದ್ಧೆ, ನಿಷ್ಕಲ್ಮಶ ಪ್ರೀತಿ ಗಳಿಂದ ಶ್ರೇಷ್ಠರಾದವರು. ಭಗವಂತನ ಮತ್ಸ್ಯ,ಕೂರ್ಮ,ವಾಮನ, ನರಸಿಂಹ, ರಾಮ, ಕೃಷ್ಣ ಅವತಾರಗಳ ಉದ್ದೇಶ ರಾಕ್ಷಸ ಸಂಹಾರ ಮಾಡುವುದ ಆಗಿತ್ತು. ಆದರೆ “ಅಜ್ಞಾನ ಸಂಹಾರ' ಮಾಡುವ ಸಲುವಾಗಿ ಗುರು ಸ್ವರೂಪ 'ದತ್ತಾತ್ರೇಯರು' ಅವತಾರ ತಾಳಿದರು.
ದತ್ತಾವತಾರ ಆಗಿದ್ದು ಹೇಗೆ?
ಭಗವಂತನ “ದತ್ತಾತ್ರೇಯ” ಅವತರಣ ಆಗುವ ಒಂದು ಸಂದರ್ಭ ಹೀಗಿತ್ತು. ಒಮ್ಮೆ ಭಗವಂತ ವೈಕುಂಠದಲ್ಲಿರುವ ಎಲ್ಲಾ ಸಂಪತ್ತನ್ನು ಖಾಲಿ ಮಾಡಬೇಕೆಂದು ನಿರ್ಧರಿಸಿದನು. (ಮನುಷ್ಯನೂ ಹಾಗೆ ಮನಸ್ಸಿನ ವಿಷಯಗಳನ್ನು ಖಾಲಿ ಮಾಡುವುದರ ಜೊತೆಗೆ, ಗಳಿಸಿದ ಸಂಪತ್ತನ್ನು ಖಾಲಿ ಮಾಡಿ ದಾಗ ಕಲಿತ ಜ್ಞಾನ ಮಾತ್ರ ಉಳಿಯುವುದು) ಹಾಗೆ ದಾನ ಮಾಡಲು ಒಂದು ಯಾಗವನ್ನು ಕೈಗೊಂಡನು. ಈ ಯಜ್ಞದ ಮುಖ್ಯ ಉದ್ದೇಶ ತನ್ನಲ್ಲಿರುವ ಸಕಲ ಸಂಪತ್ತು- ವಸ್ತುಗಳ ನ್ನು ಖಾಲಿ ಮಾಡುವುದೇ ಆಗಿತ್ತು. ಯಾಗದ ದಿನವನ್ನು ಗೊತ್ತು ಮಾಡಿ, ಚಕ್ರವರ್ತಿಗಳು, ಋಷಿಮುನಿಗಳು ಮತ್ತು ಬ್ರಾಹ್ಮಣರಿಗೆ ವೈಕುಂಠಕ್ಕೆ ಬರಲು ಆಹ್ವಾನ ಕಳಿಸಿದನು.
ಯಾಗದ ದಿನ ಮಹರ್ಷಿಗಳಾದ ಭೃಗು- ವಿಶ್ವಾಮಿತ್ರ- ಭಾರದ್ವಾಜ- ವಸಿಷ್ಠರು - ಅಗಸ್ತ್ಯರು- ಕಶ್ಯಪ- ಜಮದಗ್ನಿ- ವಸಿಷ್ಠ- ಗೌತಮ ಮಹರ್ಷಿ, ಚಕ್ರವರ್ತಿಗಳು, ಬ್ರಾಹ್ಮಣರು
ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಯಜ್ಞಕ್ಕೆ ಬಂದರು. ಯಜ್ಞ ಮುಗಿಯಿತು ಪೂರ್ಣಾಹುತಿ ಕೊಟ್ಟು. ಎಲ್ಲರಿಗೂ ಭಗವಂತನೇ ಮುಂದೆ ನಿಂತು ಅತಿಥಿ ಸತ್ಕಾರ ಮಾಡಿ, ಸತ್ಕರಿಸಿ ಅತಿಥಿಗಳಿಗೆ ಹೇಳಿದ, ಈ ವೈಕುಂಠದಲ್ಲಿರುವ ಸಂಪತ್ತನ್ನು ಯಾರಿಗೆ ಏನೇನು ಬೇಕೋ ತೆಗೆದುಕೊಂಡು ಹೋಗಿ, ಇಲ್ಲಿ ಅಪ್ಸರೆಯರು ಆನೆ, ಕುದುರೆ, ಗೋವು, ರಥ, ಚಿನ್ನ, ವಜ್ರ -ವೈಡೂರ್ಯ, ಸಿಂಹಾಸನ, ರತ್ನ- ಧನ- ಕನಕ ಪಿತಾಂಬರ ಮುತ್ತು ರತ್ನಗಳಿಂದ ಕಟ್ಟಿದ ವೈಕುಂಠದ ಕಂಬ ತೊಲೆ ಬಾಗಿಲು ಎಲ್ಲವನ್ನು ಅತಿಥಿಗಳು ತೆಗೆದುಕೊಂಡು ಹೋದರು. ಕೊನೆಗೆ ದ್ವಾರಪಾಲಕರಾದ ಜಯ -ವಿಜಯ ರ ಕೈಲಿದ್ದ ಬೆಳ್ಳಿ ದಂಡವನ್ನು ತೆಗೆದುಕೊಂಡು ಹೋದರು. ವೈಕುಂಠ ಖಾಲಿ. ಖಾಲಿಯಾದ ವೈಕುಂಠದಲ್ಲಿ ಭಗವಂತ ಒಬ್ಬನೇ ಕುಳಿತಿದ್ದಾನೆ. ಯಜ್ಞ ಕಾರ್ಯಕ್ಕೆ ಬಂದವರೆಲ್ಲ ಸ್ಮೃತಿ ಪಟಲದಲ್ಲಿ ಬಂದರು. ಆದರೆ ಅತ್ರಿ ಮಹರ್ಷಿಗಳು ಬಂದಿಲ್ಲ ಎಂಬುದು ಗಮನಕ್ಕೆ ಬಂದು ಅವರನ್ನು ಕರೆ ತರಲು ಜಯ ವಿಜಯರನ್ನು ಕಳಿಸಿದನು.
ದ್ವಾರಪಾಲಕರು ಅತ್ರಿ ಮಹರ್ಷಿಗಳನ್ನು ಕರೆಯಲು ಬಂದಾಗ,ಅತ್ರಿಗಳು ಜಪ -ತಪ ನಿತ್ಯಾನುಷ್ಟಾನಗಳಲ್ಲಿ ತೊಡಗಿದ್ದು, ಇನ್ನೂ ಮುಗಿದಿರಲಿಲ್ಲ. ಅಹ್ನಿಕ ಮಾಡುವುದು ಬಾಕಿ ಇತ್ತು ಅವರು ಅನುಷ್ಠಾನಗಳನ್ನು ಮುಗಿಸಿ ಬರುತ್ತೇನೆ,
ಎಂದು ಕೈ ಸನ್ನೆ ಮಾಡಿ ಹೇಳಿ, ನೀವು ಹೋಗಿ ಎಂದರು. ಮಹರ್ಷಿಗಳು ಎಲ್ಲಾ ಮುಗಿಸಿ ವೈಕುಂಠಕ್ಕೆ ಬಂದರು. ದ್ವಾರಪಾಲಕರು, ಮಹರ್ಷಿಗಳೇ ಈಗ ಬಂದಿರಲ್ಲ ಇಲ್ಲಿ ಏನೂ ಉಳಿದಿಲ್ಲ ಎಲ್ಲಾ ಖಾಲಿ ಎಂದರು. ಅತ್ರಿಗಳು ಹೇಳಿದರು ನಾನು ಬಂದಿರುವ ವಿಷಯ ಭಗವಂತನಿಗೆ ಹೇಳು ಎನ್ನುತ್ತಿದ್ದಂತೆ. ಸ್ವತಃ ಭಗವಂತನೇ ಎದ್ದು ಬಂದು ಅತ್ರಿ ಮಹರ್ಷಿಗಳನ್ನು ಒಳಗೆ ಕರೆದೊಯ್ದು ಹೇಳಿದ, ಮಹರ್ಷಿಗಳೇ ನಿಮ್ಮನ್ನು ಕೂರಿಸಲು ಒಂದು ಆಸನವೂ ಇಲ್ಲ. ನಿಮಗೆ ಏನು ಕೊಡಲಿ ಮಹರ್ಷಿಗಳೇ ಎಂದನು. ಏಕೆ ಹಾಗೆ ಹೇಳುವೆ ನಾರಾಯಣ, ಎಲ್ಲಾ ಖಾಲಿಯಾದರೆ ಆಗಲಿ
ನನಗೆ ನೀನಿರುವೆಯಲ್ಲ ಎಂದರು.
ಭಗವಂತನಿಗೆ ಅದೇ ಬೇಕಾಗಿತ್ತು ಅವರ ಮಾತನ್ನು ಒಪ್ಪಿ ಹೇಳಿದ, ನನ್ನ ವಿನಃ ನಿಮಗೆ ಕೊಡಲು ಬೇರೆ ಎನೂ ಇಲ್ಲ ನಾನು ನಿಮ್ಮ ನಿಷ್ಠೆ- ಅನುಷ್ಠಾನವನ್ನು ಮೆಚ್ಚಿದ್ದೇನೆ. ಆದ್ದರಿಂದ ನಾನೇ ಸ್ವತಃ ನನ್ನನ್ನೇ ನಿಮಗೆ ದಾನ ಕೊಡುವೆ ಎಂದನು. ಭಗವಂತ ತನ್ನನ್ನು ತಾನೇ ಅತ್ರಿ ಮಹರ್ಷಿಗಳಿಗೆ ದಾನ ಕೊಟ್ಟನು. ಹೀಗೆ ಅತ್ರಿಗಳಿಗೆ ಪಾನಿ ದಾನವಾಗಿ ಕೊಟ್ಟುಕೊಂಡ ಕಾರಣ 'ದತ್ತ' ಎಂಬ ಹೆಸರು ಬಂದಿತು. ಮುಂದೆ ಅತ್ರಿ- ಅನುಸೂಯಾ ದಂಪತಿಗಳ ಮಗನಾಗಿ ಭಗವಂತನೇ “ದತ್ತಾತ್ರೇಯ”ನಾಗಿ ಅವತರಿಸಿದನು.
ಆದೌ ಬ್ರಹ್ಮಾ ಮಧ್ಯ ವಿಷ್ಣುರಂತೇ
ದೇವ: ಸದಾಶಿವ: !
ಮೂರ್ತಿ ತ್ರಯ ಸ್ವರೂಪಾಯ
ದತ್ತಾತ್ರೇಯ ನಮೋಸ್ತುತೆ!!
ವಾಟ್ಸಪ್ ಸಂಗ್ರಹ---
ನಮ್ಮ ಅಜ್ಜಿ ನಾವು ಸಣ್ಣವರಿರುವಾಗ ಶಾಲೆಗೆ ರಜೆ ಬಂತೆಂದರೆ ಮನೆಗೆ ಬರೋರು. ಆಗ ರಾಮಾಯಣ ಶನಿಮಹಾತ್ಮೆ, ಗುರು ಚರಿತ್ರೆ ಹೀಗೇ ಪುರಾಣದ ಪುಸ್ತಕ ಓದಿಸುತ್ತಿದ್ದರು. ನನಗೆ ಆಗ ಅದರಲ್ಲಿ ಏನೂ ಅರ್ಥ ವಾಗುತ್ತಿರಲಿಲ್ಲ.ಅಕ್ಕಂದಿರು ಓದಿದರೆ ಜೊತೆಗೆ ಕುಳಿತು ಕೇಳೋದಷ್ಟೆ. ಆದರೆ ಅದರ ಪ್ರಭಾವ ನಿಧಾನವಾಗಿ ಆಗೇ ಆಗುವುದೆನ್ನುವುದರ ಅರಿವು ಈಗ ಆಗಿದೆ. ಈ ಜನ್ಮದಲ್ಲಿ ಭಗವದ್ಗೀತೆ ಓದಿರಲಿಲ್ಲ ೩೬ನೇ ವಯಸ್ಸಿನಲ್ಲಿ ಅದರ ವಿಚಾರ ಒಳಗಿನಿಂದ ತಿಳಿಯುತ್ತಾ ಅದರೊಂದಿಗೆ ವಾಸ್ತವತೆಯನ್ನು ಅರ್ಥ ಮಾಡಿಕೊಂಡು ತನ್ನ ತಾನರಿಯುವ ಪ್ರಯತ್ನದಲ್ಲಿ ಇಲ್ಲಿಯವರೆಗೆ ಅನುಭವಿಸಿ ತಿಳಿದ ವಿಚಾರವನ್ನು ಲೇಖನಗಳ ಮೂಲಕ ಹೊರಹಾಕುವ ಪ್ರಯತ್ನ ಆಗಿದೆ. ಆತ್ಮಜ್ಞಾನ ಓದಿ ಬರೋದಲ್ಲ ಅನುಭವಿಸಿ ತಿಳಿಯೋದು ಎನ್ನುವ ಸತ್ಯ ಅರ್ಥ ವಾಗಿದೆ. ಈ ವಿಚಾರದಲ್ಲಿ ಸಾಕಷ್ಟು ಒಳಗೆ ಹೊರಗೆ ಹುಡುಕಿ ಕೇಳಿ,ನೋಡಿ,ಮಾಡಿದ ಮೇಲೆ ಎರಡೂ ಕಡೆಯೂ ಒಂದೇ ಶಕ್ತಿ ಇರೋವಾಗ ಅರಿವೇ ಗುರು.
ಸಣ್ಣವಳಿದ್ದಾಗ ಇದ್ದ ಪ್ರಶ್ನೆಗೂ ಈಗಿನ ಪ್ರಶ್ನೆಗೂ ಅಂತರವಿದೆ.
ಅಂದು ನನಗೇನೂ ತಿಳಿದಿರಲಿಲ್ಲವೆಂದು ಪ್ರಶ್ನೆ ಮಾಡಿದರೆ ಈಗ ತಿಳಿದ ಮೇಲೂ ಹೊರಗಿರುವ ಅಸತ್ಯ ಅ ನ್ಯಾಯ ಅಧರ್ಮ ವನ್ನು ಪ್ರಶ್ನೆ ಮಾಡುವ ಅಧಿಕಾರಯಾಕಿಲ್ಲ ಎಂದು ತಿಳಿದವರಿಗೆ ಪ್ರಶ್ನೆ ಮಾಡಿದರೂ ಉತ್ತರವಿಲ್ಲ.
ಕೆಲವರಿಗೆ ತಪ್ಪು ಎಂದು ತಿಳಿದರೂ ತಿಳಿಸೋದಿಲ್ಲ.
ಹಲವರಿಗೆ ಸತ್ಯದ ಅರಿವಿಲ್ಲದೆ ತಪ್ಪು ದಾರಿ ಹಿಡಿಯುವರು.
ಇದರಲ್ಲಿ ನಿಜವಾದ ತಪ್ಪಿತಸ್ಥ ರು ಯಾರು? ಎಂದರೆ ತಿಳಿದವರು ಎನ್ನುವರು. ಹೀಗಾಗಿ ಶಿಕ್ಷಣದಲ್ಲಿ ತಪ್ಪಾದರೆ ಮಕ್ಕಳ ತಪ್ಪಲ್ಲ. ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರಿಲ್ಲವೆನ್ನುವಂತಹ ಪರಿಸ್ಥಿತಿಗೆ ಬಂದಾಗಲೇ ಅವತಾರವೆತ್ತಿ ಬರೋದು ಗುರುಗಳು.
ದತ್ತಾತ್ರೇಯ ತ್ರಿಮೂರ್ತಿಗಳ ಅಂಶದಿಂದ ಅವತಾರ ತಾಳಿದ ಮಹಾವಿಷ್ಣುವಿನ ಗುರುಸ್ವರೂಪರು. ಎಲ್ಲಾ ಪುರಾಣ ಓದಿ ದೇವತೆಗಳನ್ನು ತಿಳಿಯಬಹುದು. ಗುರು ಚರಿತ್ರೆ ಓದಿದರೆ ನಮ್ಮ ಈ ಸ್ಥಿತಿಗೆ ಕಾರಣದ ಜೊತೆಗೆ ಪರಿಹಾರವೂ ಸಿಗಬಹುದು.
ನಮ್ಮಜ್ಜಿ ಸೀತಮ್ಮನವರು ಬಹಳ ದೈವಭಕ್ತರು ಜ್ಞಾನಿಗಳು ಸತ್ಯ ಅನುಭವಿಸಿ ತಿಳಿದವರು.ಕಷ್ಟಪಟ್ಟು ಜೀವನ ಸಾಗಿಸಿದವರು.ನಮ್ಮಮ್ಮ ಶ್ರೀಮತಿ ಮಹಾಲಕ್ಷ್ಮಿ ಪತಿವ್ರತೆ ಸಾದ್ವಿ ಆಚಾರವಂತರಾಗಿ ಸರಳ ಜೀವನದ ಜೊತೆಗೆ ಸಾತ್ವಿಕರಾಗಿದ್ದರು. ತಂದೆಯವರು ದಿವಂಗತರಾದ ಶ್ರೀ ಶೇಷಭಟ್ಟರು ಶಿಕ್ಷಕರಾಗಿ,ಶಾಲಾತನಿಖಾಧಿಕಾರಿಗಳಾಗಿ ನಿವೃತ್ತಿ ಹೊಂದಿದ ಮೇಲೆ ದೇವತಾಕಾರ್ಯದಲ್ಲಿ ತೊಡಗಿಸಿಕೊಂಡು ದೊಡ್ಡ ಸಂಸಾರದ ಜವಾಬ್ದಾರಿಯನ್ನು ಸುಸೂತ್ರವಾಗಿ ಮುಗಿಸಿ ಸ್ವರ್ಗಸ್ಥರಾದರು. ಅಮ್ಮ ಹೋದ ವರ್ಷದಲ್ಲಿಯೇ ಅಪ್ಪನ ಕಳೆದುಕೊಂಡ ಮೇಲೆ ನನ್ನ ಬರವಣಿಗೆಯಲ್ಲಿ ಹೊರಬರುವ ವಿಚಾರದಲ್ಲಿ ಹೆಚ್ಚು ಗಮನಿಸುತ್ತಾ ಮುಂದೆ ಬಂದ ನನಗೆ ಕೆಲವು ಸತ್ಯ ತಡವಾಗಿ ಸ್ಪಷ್ಟ ವಾದರೂ ಮೊದಲಿನಿಂದಲೂ ನನ್ನ ಪ್ರಶ್ನೆಗೆ ಉತ್ತರ ನೀಡದವರ ಜೊತೆಗೆ ಇದ್ದರೂ ಪ್ರಶ್ನೆ ಮಾಡುವುದನ್ನು ಬಿಟ್ಟಿದ್ದೇನೆಂದರೆ ಉತ್ತರ ಒಳಗೇ ಸಿಗುವಾಗ ಪ್ರಶ್ನೆ ಬರೋದಿಲ್ಲ.
ಆದರೆ ಭೌತಿಕ ಜಗತ್ತಿನಲ್ಲಿ ಉತ್ತರಕ್ಕಾಗಿ ಸಾಕಷ್ಟು ಪ್ರಯೋಗ ನಡೆಯುತ್ತದೆ. ಆ ಪ್ರಯೋಗ ಯೋಗದಿಂದ ಆದಾಗ ಉತ್ತರ ಸಿಗಬಹುದು. ಹೀಗಾಗಿ ಭಗವಂತ ಯೋಗಿಗಳಲ್ಲಿ ಹೆಚ್ಚಾಗಿ ಕಾಣುವನು. ಭೋಗದಲ್ಲಿ ಕಾಣೋದು ಕಷ್ಟ.
ಯೋಗವೆಂದರೆ ಸೇರೋದು ಕೂಡೋದು ಸಹಕರಿಸೋದು
ಇದರಲ್ಲಿ ಸತ್ಯಕ್ಕೆ ಸತ್ಯ ಸೇರಬೇಕು, ಸತ್ಯಕ್ಕೆ ಧರ್ಮ ಸೇರಬೇಕು
ಜೀವಾತ್ಮನು ಪರಮಾತ್ಮನ ಸೇರಬೇಕು. ಯಾವಾಗಿದು ವಿರುದ್ದ ಹೋಗುವುದೋ ಅದೇ ಅಧರ್ಮ ವಾಗುತ್ತದೆ.
ಪರಮಾತ್ಮನ ಅವತಾರಗಳಲ್ಲಿ ಬದಲಾವಣೆ ಆಗಿದ್ದರೂ ಭಗವಂತನೊಬ್ಬನೆ. ಭಗವದ್ಗೀತೆ ಯಲ್ಲಿಯೇ ನಾವು ಒಮ್ಮೊಮ್ಮೆ ಪರಮಾತ್ಮ,ಭಗವಂತ..ಶ್ರೀ ಕೃಷ್ಣನಿಗೆ ಹಲವು ಹೆಸರಿದ್ದರೂ ಎಲ್ಲಾ ಶಕ್ತಿಯೂ ಅವನಹೆಸರಿನಲ್ಲಿದೆಂದರ್ಥ.
ಹಾಗಾಗಿ ಕೃಷ್ಣ ಪರಮಾತ್ಮನಲ್ಲ ಎನ್ನುವುದು ತಪ್ಪಾಗುತ್ತದೆ.
ಹಿಂದಿನ ಪೋಸ್ಟ್ ಇದೇ ವಿಚಾರವಾಗಿ ಚರ್ಚೆಯ ರೂಪ ತಳೆದಿತ್ತು. ಅದ್ವೈತ ದೊಳಗೇ ದ್ವೈತ ಇರೋಹಾಗೆ ದ್ವೈತದಿಂದ ಭೂಮಿ ಇದೆ. ಭಗವಂತನೊಳಗೆ ಭೂಮಿ ಇದೆ. ಭೂಮಿ ಮೇಲಿನಮನುಕುಲಕ್ಕೆ ಪರಮಾತ್ಮನ ಅರ್ಥ ಮಾಡಿಕೊಳ್ಳುವ ಜ್ಞಾನವಿದೆ. ಜ್ಞಾನಕ್ಕೆ ಸರಿಯಾದ ಗುರು ಇದ್ದರೆ ಮಾತ್ರ ಇದು ಸಾಧ್ಯವಿದೆ.
ಒಟ್ಟಿನಲ್ಲಿ ದೇವತೆಗಳಿಗೂ ಗುರುವಿದ್ದರು,ಅಸುರರಿಗೂ ಗುರುವಿದ್ದರು,ಮಾನವರಿಗೂ ಇದ್ದಾರೆ. ಗುರು ಯಾವ ಮಾರ್ಗ ದಲ್ಲಿ ನಡೆಸುವರೋ ಶಿಷ್ಯ ನಡೆಯುವರಷ್ಟೆ. ಅದಕ್ಕೆ ಗುರುವೇ ದೇವರೆಂದರು.
ಯಾವಾಗ ಅಸುರ ಗುರುಗಳು ಹಣ,ಅಧಿಕಾರ,ಸ್ಥಾನಕ್ಕಾಗಿ ಮಾನವರನ್ನು ಹೊರಗೆಳೆಯುವರೋ ಆಗ ದೇವಗುರುಗಳು ಅರ್ಥ ವಾಗದೆ ಹಿಂದುಳಿಯುವರು... ಈಗಿನ ಸ್ಥಿತಿ ಹೀಗಿದೆ.
ಓದದೆಯೇ ಅಧ್ಯಾತ್ಮ ವಿಚಾರಗಳು ಒಳಗಿನಿಂದ ತಿಳಿಯಬೇಕಾದರೆ ಅದೊಂದು ದೈವಪ್ರೇರಣೆಯಷ್ಟೆ. ನಮ್ಮನ್ನು ದೇವರು ನಡೆಸೋದಕ್ಕೂ ನಾವು ದೇವರನ್ನು ನಡೆಸೋದಕ್ಕೂ ವ್ಯತ್ಯಾಸವಿದೆ. ನಮ್ಮನ್ನು ದೇವರು ನಡೆಸುವಾಗ ನಾನೆಂಬುದಿರದು ಅಧ್ವೈತ.
ನಾನೇ ದೇವರನ್ನು ನಡೆಸುವಾಗ ನಾನಿರುತ್ತೇನೆ ದ್ವೈತ.
ಎರಡೂ ಒಂದೇ ನಾಣ್ಯದ ಎರಡು ಮುಖ. ಒಂದೇ ಮುಖ ನೋಡಿದರೆ ಇನ್ನೊಂದು ಅರ್ಥ ವಾಗದು. ಹಾಗಾಗಿ ಭೂಮಿಯ ಮೇಲಿರುವ ನಾವು ದೇವರ ಮಕ್ಕಳು ನಿಜ
ಹಾಗಾದರೆ ನಮ್ಮಲ್ಲಿ ದೈವತ್ವವಿದೆಯೆ? ಈ ಪ್ರಶ್ನೆಗೆ ಉತ್ತರ ಒಳಗಿನಿಂದ ಸಿಕ್ಕರೆ ಆತ್ಮಾವಲೋಕನ. ಹೊರಗೆ ಹುಡುಕಿದರೆ ಸಿಗದೆ ಅಹಂಕಾರ ಆವರಿಸಬಹುದು.
ಮಾಯಾಮೋಹದ ಮುಸುಕಿನಲ್ಲಿ ಮಲಗಿರುವ ನಾವು ಮಾನವರು. ನಮ್ಮನ್ನು ದೇವಾಸುರರ ಶಕ್ತಿ ಒಳಗಿದ್ದೇ
ನಡೆಸುತ್ತಿದ್ದರೂ ಕಾಣಿಸುತ್ತಿಲ್ಲ.ಇದು ಪುರಾಣದಲ್ಲಿಯೂ ಕಾಣುತ್ತೇವೆ, ಈಗಲೂ ಇದೆ ಎಂದರೆ ನಾವು ಕಾರಣಮಾತ್ರರಷ್ಟೆ.
ಕಲಿಯುಗದಲ್ಲಿ ಹೊಂದಾಣಿಕೆ ಕಷ್ಟವಿದೆ. ಹಾಗಂತ ಹೊಂದಿಕೊಂಡು ಹೋಗದಿದ್ದರೆ ನಷ್ಟ ಕಷ್ಟ ಹಿಂದೂಗಳಿಗೆ ಕಟ್ಟಿಟ್ಟ ಬುತ್ತಿ. ಎಲ್ಲಿಯವರೆಗೆ ಒಗ್ಗಟ್ಟು ಇರುವುದಿಲ್ಲವೋ ಭಿನ್ನಾಭಿಪ್ರಾಯ ದ್ವೇಷ,ಅಸೂಯೆ ಅಸಹಕಾರದ ಕ್ರಾಂತಿ ಇರುತ್ತದೆ. ಶಾಂತಿಯಿಂದಷ್ಟೇ ಗುರಿ ತಲುಪಬಹುದೆಂದರೆ ಶಾಂತಿ ಹೊರಗಿದೆಯೋ ಒಳಗೋ?
ಪ್ರಕೃತಿಯ ಸಣ್ಣ ಬಿಂದು ಮಾನವನೊಳಗಿದ್ದು ಪ್ರಕೃತಿಯನ್ನು ಹಿಡಿತದಲ್ಲಿಡಬಹುದೆ? ಹಿಡಿತದಿಂದ ಭಗವಂತನೆಡೆಗೆ ಸಾಗಬಹುದೆ?
ಭೂಮಿ ವಿಶಾಲವಾಗಿದೆ, ಪ್ರಕೃತಿ ಉಚಿತವಾಗಿದೆ ,ಪಂಚಭೂತಗಳಿಂದಾದ ಶರೀರದಲ್ಲಿ ಶಕ್ತಿ ಅಡಗಿದೆ. ಆದರೆ ಪರಾವಲಂಬನೆ ಮಿತಿಮೀರಿದೆ. ಇದೇ ಭ್ರಷ್ಟಾಚಾರವಾಗುತ್ತಿದೆ. ಸರ್ಕಾರ ಏನು ಕೊಡುತ್ತದೆ ಎಂದು ಕುಳಿತಷ್ಟೂ ಸಾಲ ಬೆಳೆಯುತ್ತದೆ ಜೀವ ಹೋಗುತ್ತದೆ.
"ನಿನ್ನಯ ಗುರಿಯು ಆತ್ಮದರುಶನ ನಿನ್ನೊಳಗೇ ಇದೆ ಆ ರತುನ ಬನ್ನ ಪಡುತ ಈಕ್ಷುದ್ರ ಜೀವನದಿ ಇನ್ನೂ ತೊಳಲದಿರು ಮುನ್ನೆಡೆ ಸಖನೆ.. "ಸ್ವಾಮಿ ವಿವೇಕಾನಂದರನ್ನು ಹೊರಗಿನಿಂದ ಬೆಳೆಸಿದರೆ ರಾಜಕೀಯ ಒಳಗಿನಿಂದ ಕಂಡರೆ ರಾಜಯೋಗ ಏನಂತೀರಾ?
ಒಂದರ್ಥದಲ್ಲಿ ಎಲ್ಲಾ ಗುರು.ಇನ್ನೊಂದು ರೂಪದಲ್ಲಿ ಯಾರೂ ಇಲ್ಲ.ದತ್ತಾತ್ರೇಯರು 24 ಗುರುಗಳನ್ನು ಸೃಷ್ಟಿ ಯಲ್ಲಿ ನೋಡಿದ್ದರೆಂದರೆ ಪ್ರಕೃತಿಯಿಂದ ತಿಳಿಯುವುದು ಬಹಳವಿದೆ ಅಲ್ಲವೆ?