"ನಿನ್ನಯ ಗುರಿಯು ಆತ್ಮದರುಶನ ನಿನ್ನೊಳಗೇ ಇದೆ ಆ ರತುನ ಬನ್ನಪಡುತ ಈ ಕ್ಷುದ್ರ ಜೀವನದಿ ಇನ್ನು ತೊಳಲದಿರು ಮುನ್ನಡೆ ಸಖನೇ ಉತ್ತಿಷ್ಠತಾ ಜಾಗ್ರತ ಹೇ ಮನುಜ....
ಭಾರತೀಯರ ಅದರಲ್ಲೂ ಹಿಂದೂಗಳ ಈ ಸ್ಥಿತಿಗೆ ಅಧ್ಯಾತ್ಮಿಕ ವಾಗಿ ಕಾರಣ ತಿಳಿಯುತ್ತಾ ಹೋದಂತೆಲ್ಲ ಕಂಡ ಸತ್ಯ ಇದಾಗಿದೆ. ಸ್ವಲ್ಪ ಆತ್ಮಾವಲೋಕನ ದಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟರೆ ಹಿಂದೂಗಳು ಹಿಂದಿರುಗಿ ಬರಬಹುದು. ಓದಿ ಪ್ರತಿಕ್ರಿಯೆ ನೀಡಿ ಸ್ನೇಹಿತರೆ,
ಗೃಹಲಕ್ಮಿಯನ್ನು ಕಡೆಗಣಿಸಿದ ಪರಿಣಾಮವೇ ಇಂದಿನ ಗೃಹಲಕ್ಮಿ ಯೋಜನೆ. ಲಕ್ಮಿ ಯ ಸ್ವರೂಪ ಅನೇಕ ಅದರಲ್ಲಿ ಗೃಹಲಕ್ಮಿ ಮುನಿದರೆ ಎಲ್ಲರಿಗೂ ತಗಲುವುದು ಶಾಪ.
ಭಾರತೀಯ ಧರ್ಮ ಸಂಸ್ಕೃತಿ ಉಳಿಸಿಬೆಳೆಸಿರೋ ಗೃಹಲಕ್ಮಿ ಯರನ್ನು ಕೇವಲವಾಗಿ ಕಾಣುತ್ತಾ ಅವರನ್ನು ಹೊರಗೆ ದುಡಿದು ಜೀವನ ನಡೆಸುವಂತೆ ಮಾಡಿದಾಗಲೇ ಮನೆಯೊಳಗೆ ಇದ್ದ ಲಕ್ಮಿ ಹೊರಗೆ ಹೆಚ್ಚು ಹೆಚ್ಚು ಹರಿದಾಡಲು ಪ್ರಾರಂಭವಾಯಿತು. ಇತಿಮಿತಿಗಳನ್ನು ಕಾಯ್ದುಕೊಂಡು ಸಂಚಾರಕ್ಕಾಗಿ ತನ್ನ ಸ್ವಂತಿಕೆಯನ್ನು ಮರೆತು ಶ್ರಮವಹಿಸಿ ಯಾವುದೇ ನಿರೀಕ್ಷೆಯಿಲ್ಲದೆಯೇ ಧರ್ಮ ಪತ್ನಿ ಪತಿವ್ರತೆಯಾಗಿದ್ದವರಿಗೆ ಸಿಕ್ಕಿದ್ದು ಅಬಲೆ ಅನಕ್ಷರಸ್ಥೆ, ಅಸಹಾಯಕಿ ಪಟ್ಟ. ಇದರಿಂದಾಗಿ ಸಿಡಿದು ಹೊರಬಂದವರು ತಮ್ಮ ಜೀವನ ತಾವೇ ನಡೆಸಿಕೊಂಡು ಹೋಗುವ ವಿದ್ಯಾವಂತರಾಗಿ ಸ್ವತಂತ್ರ ಚಿಂತನೆ ಗಳಿಂದ ಸಮಾಜದ ಮಧ್ಯೆ ನಿಂತು ಹೋರಾಟಗಳೂ ನಡೆದಿವೆ. ಇದನ್ನು ಸ್ವಾಗತಿಸಿದವರಿಗಿಂತ ವಿರೋಧಿಸಿದವರೂ ಸ್ತ್ರೀ ಯರೆ ಆಗಿರೋದು ಸತ್ಯ. ಯಾವಾಗ ಸ್ತ್ರೀ ಶಕ್ತಿ ಸಂಘಟನೆ ಎದ್ದು ನಿಂತವೋ ಮನೆಯೊಳಗಿನ ಸಮಸ್ಯೆಗಳು ಬೆಳೆದವು.
ಹಣದಿಂದ ಸಮಸ್ಯೆ ಬಗೆಹರಿಸುವ ಅನೇಕ ಯೋಜನೆಗಳೂ ಸರ್ಕಾರದಿಂದ ಪಡೆದರೂ ಅದರ ಹಿಂದಿನ ಸಾಲ ಮಾತ್ರ ಮಿತಿಮೀರಿದಾಗ ತೀರಿಸಲು ಸ್ತ್ರೀ ಭ್ರಷ್ಟಾಚಾರ ಕ್ಕೆ ಸಹಕರಿಸಬೇಕಾಯಿತು. ಅಧರ್ಮ, ಅನ್ಯಾಯ ಅಸತ್ಯದ ಪರವಾಗಿ ನಿಂತು ಹಣ ಬಂದಾಗ ಸಾಲ ತೀರಿಸಬಹುದೆನ್ನುವ ಭ್ರಮೆಯಲ್ಲಿ ಭ್ರಷ್ಟ ದುಷ್ಟರ ವಶದಲ್ಲಿ ಸ್ತ್ರೀ ಸಿಲುಕಿದರೆ ಸಂಸಾರದ ಗತಿ ಏನಾಗಬಹುದು.
ಈಗಂತೂ ಶಿಕ್ಷಣವೇ ದುಬಾರಿ. ಮಕ್ಕಳಿಗೆ ಜ್ಞಾನ ಬರುವುದೋ ಇಲ್ಲವೋ ಒಟ್ಟಿನಲ್ಲಿ ಪ್ರತಿಷ್ಠಿತ ಶಾಲಾ ಕಾಲೇಜ್ ಬೆಳೆದುನಿಂತಿವೆ. ಸಾಲ ಮಾಡಿಯಾದರೂ ಅಂತಹ ಶಾಲೆಯಲ್ಲಿ ಕಲಿಸಲು ಪೋಷಕರು ಸರದಿಸಾಲಿನಲ್ಲಿ ನಿಂತರೆ ಮನೆಯೊಳಗೆ ಇರೋರಿಗೆ ಹೊರಗೆ ಒಳಗೆ ದುಡಿಯೋದು ಅನಿವಾರ್ಯ. ಇವೆಲ್ಲವೂ ನಮ್ಮ ಕಣ್ಣ ಮುಂದೆಯೇ ಕಾಣುವ ಸತ್ಯ. ಕೆಲವರಿಗೆ ಸಾಕಷ್ಟು ಆಸ್ತಿ ಹಣವಿದ್ದರೂ ಮನೆಯೊಳಗೆ ಕುಳಿತು ಮಾಡಲು ಕೆಲಸವಿಲ್ಲದೆ ಹೊರಗೆ ದುಡಿಯಲು ಹೋದರೆ ಹಲವರಿಗೆ ಸಂಸಾರ ಸಾಗಿಸಲೂ ಕಷ್ಟವಾಗಿ ದುಡಿಯದೆ ನಡೆಯೋದಿಲ್ಲ. ಇನ್ನೂ ಕೆಲವರಿಗೆ ಉದ್ಯೋಗ ವಿಲ್ಲವಾದರೆ ಮನೆಯೊಳಗೆ ಗೌರವ ಬೆಲೆ ಸಿಗದು.
ವಿದ್ಯೆ ಕಲಿತವರು ಅದನ್ನು ಬಳಸಿ ಹಣ ಗಳಿಸಿದರೆ ತೃಪ್ತಿ, ನೆಮ್ಮದಿ.ಹೀಗಾಗಿ ಸಾಕಷ್ಟು ಹಣಸಂಪಾದನೆಯಾದಂತೆಲ್ಲಾ ಭೌತಿಕಾಸಕ್ತಿ ಹೆಚ್ಚಾಗುತ್ತಾ ಅಧ್ಯಾತ್ಮಿಕ ವಿಚಾರದಲ್ಲಿ ಜ್ಞಾನ ಕುಸಿಯಿತು. ಗೃಹಲಕ್ಮಿ ಯೋಜನೆಯ ಫಲಾನುಭವಿಗಳಲ್ಲಿ ಎಷ್ಟು ಮಹಿಳೆಯರು ಹಣವನ್ನು ಸದ್ಬಳಕೆ ಮಾಡಿಕೊಳ್ಳುವರೋ ದುರ್ಭಳಕೆ ಮಾಡಿಕೊಳ್ಳುವರೋ ಸರ್ಕಾರಕ್ಕೆ ಕಾಣೋದಿಲ್ಲವಾದರೂ ಮೇಲಿರುವ ದೇವರ ಸರ್ಕಾರ ನೋಡುತ್ತಿರುತ್ತದೆ. ಸ್ತ್ರೀ ಲಕ್ಮಿ ಸ್ವರೂಪ.ಅವಳಿಗೆ ಬೆಲೆಕಟ್ಟಲು ಕಷ್ಟವಿದೆ.ಆದರೂ ಕೇವಲ ಸಣ್ಣ ಪ್ರಮಾಣದ ಹಣದಿಂದ ಅಳೆಯುವಾಗ ಗೌರವ ಸಿಗದು. ಒಟ್ಟಿನಲ್ಲಿ ಜ್ಞಾನದೇವತೆಯಾಗಿದ್ದ ಸ್ತ್ರೀ ಹಣದ ದೇವತೆಯಾಗುತ್ತಾ ತೃಪ್ತಿ ಯಿಲ್ಲದೆ ದುರ್ಗೆಯಾಗಿ ಸಿಡಿದು ಹೊರಬಂದರೆ ನಷ್ಟ ಯಾರಿಗೆ? ಸ್ತ್ರೀ ಯರನ್ನು ಗೃಹಲಕ್ಮಿ ಎನ್ನುವ ಜೊತೆಗೆ ಗೃಹ ಮಂತ್ರಿ ಎಂದರು. ಮಂತ್ರಿಯ ಸಲಹೆ,ಸೂಚನೆ,ಸಹಕಾರಕ್ಕೆ ವಿರುದ್ದ ನಡೆದಾಗಲೇ ಲಕ್ಮಿ ಮುನಿದು ಹೋಗೋದಲ್ಲವೆ?
ಇಂತಹ ವಿಚಾರಗಳನ್ನು ಯಾರೂ ಗಮನಿಸೋದಿಲ್ಲ.ಕಾರಣ ದೇವರನ್ನು ಹೊರಗೆ ನೋಡುವ ಕಣ್ಣಿಗೆ ಒಳಗೇ ಇರುವ ದೈವೀ ಶಕ್ತಿಯನ್ನು ಗುರುತಿಸೋದೇ ಕಷ್ಟ.ಅದಕ್ಕಾಗಿ ಇಂದು ಎಲ್ಲಾ ಇದ್ದೂ ಏನೂ ಇಲ್ಲದ ಸ್ಥಿತಿಗೆ ಮನುಕುಲ ನಿಂತಿದೆ.
ಅದರಲ್ಲೂ ಭಾರತೀಯರ ಸ್ಥಿತಿ ಚಿಂತಾಜನಕವಾಗಿದೆ.
ಚಿಂತನೆ ಅಧ್ಯಾತ್ಮಿಕ ವಾಗಿ ನಡೆಸದೆ ರಾಜಕೀಯವಾಗಿ ನಡೆಸಿ ಸ್ತ್ರೀ ಯನ್ನು ಮನೆಯಿಂದ ಹೊರಗೆಳೆದು ತನ್ನ ಪಕ್ಷ ವೇ ಸರಿ ಎಂದರೆ ಇನ್ನೊಂದು ಪಕ್ಷವೂ ಅದೇ ಮಾಡುತ್ತದೆ. ಈ ಪಕ್ಷಪಾತದಿಂದ ಏನಾದರೂ ಅಧ್ಯಾತ್ಮಿಕ ಪ್ರಗತಿ ಸಾಧ್ಯವೆ? ಹಣ,ಅಧಿಕಾರ ಸ್ಥಾನಮಾನಕ್ಕಾಗಿ ಎಷ್ಟು ಮನಸ್ಸು ಹೊರಬಂದರೂ ಮಹಿಳೆಯರನ್ನು ಗೌರವಿಸುವ ಜ್ಞಾನಬರದು. ಹೀಗಾಗಿ ಗೃಹಲಕ್ಮಿ ಯೋಜನೆಯವರೆಗೂ ಸರ್ಕಾರ ಬೆಳೆದಿದೆ. ಇದನ್ನು ಸರಿ ಎನ್ನುವವರಿಗೆ ಹಣ ಸಿಗುತ್ತದೆ ಜೊತೆಗೆ ಸಾಲವೂ ಬೆಳೆಯುತ್ತದೆ. ಸರಿಯಲ್ಲ ಎನ್ನುವವರಲ್ಲಿ ಹಣವಿದ್ದರೂ ಗೃಹಲಕ್ಮಿ ಗೆ ಸಿಗೋದಿಲ್ಲ.
ಲಕ್ಮಿ ಯನ್ನೇ ಹಣಕೊಟ್ಟು ಖರೀದಿಸುವ ಅಜ್ಞಾನದಿಂದ ನಮ್ಮ ಧರ್ಮ ಸಂಸ್ಕೃತಿ ಭಾಷೆ ದೇಶವೇ ಪರಕೀಯರ ವಶವಾದರೂ ಆಶ್ಚರ್ಯ ವಿಲ್ಲ.ಕಾರಣ ಅಜ್ಞಾನಿಗಳನ್ನು ಅಜ್ಞಾನಿಗಳೇ ಸರಿಪಡಿಸೋದು. ಹೊರಗಣ್ಣಿಗೆ ಕಾಣುವ ಹಣ ಒಳಗಣ್ಣಿಗೆ ಕಾಣುವ ಜ್ಞಾನ ಎರಡೂ ಒಂದಾಗಲು ಮಧ್ಯದ ಕಣ್ಣು ತೆರೆಯಬೇಕಲ್ಲವೆ?
ಶಿವಶಕ್ತಿಯರ ಸಮಾನತೆಯು ಜ್ಞಾನದಿಂದಾದರೆ ಮನೆಯೊಳಗೆ ಹೊರಗೆ ಶಾಂತಿ. ಇಲ್ಲವಾದರೆ ಅಜ್ಞಾನದ ಕ್ರಾಂತಿಯ ಅಶಾಂತಿ.
ದೇವತೆಗಳನ್ನು ಬಿಡದ ಈ ಸ್ಥಿತಿ ಮಾನವರನ್ನೂ ಕಾಡುತ್ತಿದೆ.
ಉದಾಹರಣೆಗೆ ತಿರುಪತಿ ವೆಂಕಟೇಶ್ವರ ನ ಕಥೆ. ಲಕ್ಮಿ ಮುನಿಸಿಕೊಂಡು ಹೊರಬಂದಾಗ ವೆಂಕಟೇಶ್ವರ ಪದ್ಮಾವತಿಯ ವಿವಾಹ ನಂತರ ಲಕ್ಮಿ ಯ ಶಾಪವೇ ವೆಂಕಟೇಶ್ವರ ನು ತಿರುಪತಿ ಬೆಟ್ಟದಲ್ಲಿ ನೆಲೆಸುವಂತಾಯಿತು.
ಈಗ ಅವನಲ್ಲಿ ಸಾಕಷ್ಟು ಆಸ್ತಿ ಹಣ ತುಂಬಿತುಳುಕುತ್ತಿದ್ದರೂ ದೇಶದ ಸಾಲತೀರಿಸಲಾಗುತ್ತಿಲ್ಲ .ಮಾನವನಕೈಗೊಂಬೆಯಂತೆ
ವೆಂಕಟೇಶ್ವರ ಒಂದೆಡೆ ಲಕ್ಮಿ ಇನ್ನೊಂದು ಕಡೆ ಪದ್ಮಾವತಿ ಮತ್ತೊಂದು ಕಡೆ .ಹಾಗಾದರೆ ದೇವರಿರೋದೆಲ್ಲಿ? ಸಂಕಟ ಯಾರಿಗೆ? ಇಡೀ ದೇಶವೇ ವಿದೇಶಿ ಸಾಲ,ಬಂಡವಾಳ,
ವ್ಯವಹಾರ, ಶಿಕ್ಷಣದ ಜೊತೆಗೆ ಅವರ ಧರ್ಮ, ಸಂಸ್ಕೃತಿ ಯ ವಶವಾಗುತ್ತಿದ್ದರೂ ಮನೆಯೊಳಗೆ ಲಕ್ಮಿ ಯಾಗಿ ಬಂದ ಹೆಣ್ಣನ್ನು ಗೌರವದಿಂದ ಪ್ರೀತಿಯಿಂದ ವಿಶ್ವಾಸದಿಂದ ನೋಡಿಕೊಳ್ಳುವ ಸಂಸಾರಗಳು ಕಡಿಮೆಯಿದೆ. ಎಲ್ಲಿ ಸ್ತ್ರೀ ಯನ್ನು ಜ್ಞಾನದಿಂದ ನೋಡಲ್ಪಡುವುದೋ ಅಲ್ಲಿ ಜ್ಞಾನದ ಜೊತೆಗೆ ಲಕ್ಮಿ ಯೂ ನೆಲೆಸಿರುವಳು. ಅಜ್ಞಾನದಿಂದ ಲಕ್ಮಿಯನ್ನು ಬೆಳೆಸಿದರೆ ಅಜ್ಞಾನವೇ ಸುತ್ತಿಕೊಂಡು ಆಳುವುದು. ಇದು ದೇವಾನುದೇವತೆಗಳಿಗೂ ಅನ್ವಯಿಸುತ್ತದೆ. ಹೀಗಾಗಿ ಜ್ಞಾನಲಕ್ಮಿಯಾಗಿರುವ ಸರಳ ಸುಂದರ ಸ್ವಚ್ಚ ಹೃದಯವಂತ ಗೃಹಲಕ್ಮಿ ಗೃಹಮಂತ್ರಿಯರನ್ನು ಸರಿಯಾಗಿ ತಿಳಿದು ನಡೆಯುವುದಕ್ಕೆ ಪುರುಷರಿಗೆ ಸತ್ಯಜ್ಞಾನ ಅಗತ್ಯವಿದೆ. ಮಿಥ್ಯ ಜ್ಞಾನದಿಂದ ಯಾರಿಗೂ ಜೀವನ್ಮುಕ್ತಿ ಸಿಗದು. ಇಷ್ಟೇ ಜೀವನ ಸತ್ಯ. ನಿಮ್ಮ ಹೃದಯದಲ್ಲಿ ಲಕ್ಮಿ ಗೆ ಸ್ಥಾನಮಾನವಿದ್ದರೆ ಹೃದಯವಂತ ಸಂಸಾರವಾಗುತ್ತದೆ. ತಲೆಯಲ್ಲಿ ಇಟ್ಟುಕೊಂಡು ಓಡಾಡಿದರೆ ತಲೆತಿರುಗುತ್ತದೆ.
ಕಾಲಿಗೆ ಹಾಕಿ ತುಳಿದರಂತೂ ಮೇಲೇಳದಂತೆ ಮಾಡುತ್ತಾಳೆ ಎಚ್ಚರವಾದರೆ ಉತ್ತಮ ಜೀವನ.
ವರಹದಕ್ಷಿಣೆಯನ್ನು ವರದಕ್ಷಿಣೆ ಮಾಡಿಕೊಂಡು ಹೆಣ್ಣನ್ನು ಆಳಿ ಅಳಿಸಿದರು, ಕನ್ಯಾ ಆದಾನವನ್ನು ಕನ್ಯಾದಾನ ಮಾಡಿಕೊಂಡು ದಾನವರಂತೆ ನಡೆದರು. ಒಟ್ಟಿನಲ್ಲಿ ಹಿಂದೂ ಸ್ತ್ರೀ ಪುರುಷರ ಈ ಅಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮಧ್ಯವರ್ತಿಗಳು ರಾಜಕೀಯ ನಡೆಸುತ್ತಾ ಮನೆಮನಸ್ಸನ್ನು ಹಾಳು ಮಾಡಿ ಹೊರಗೆಳೆದರೆ ಒಳಗಿನ ಸತ್ಯ ಹಿಂದುಳಿದು ಧರ್ಮ ವೂ ಹಿಂದುಳಿಯಿತು. ಕಲಿಗಾಲದ ಪ್ರಭಾವವಷ್ಟೆ.ಏನಾದರೂ ತಪ್ಪು ಕಂಡರೆ ತಿಳಿಸಿ. ಕಾರಣ ಕುರುಡುಕಾಂಚಾಣ ಕುಣಿಸುತ್ತದೆಕಾಲಿಗೆ ಬಿದ್ದವರನ್ನು ತುಳಿಯುತ್ತಲೇ ಇರುತ್ತದೆ. ತುಳಿತಕ್ಕೆ ಒಳಗಾದವರ ಸಂಕಟ ಸಮಸ್ಯೆ ಸಮಾಜವನ್ನು ಹಾಳು ಮಾಡೋದಲ್ಲದೆ ದೈವತ್ವವನ್ನೇ ಇಲ್ಲವೆನ್ನುವುದು. ದೇವರಿರುವ ಮನೆ ಮನಸ್ಸು ಗುಡಿ ಗೋಪುರ ಮಠ ಮಂದಿರ ಕಟ್ಟುವುದಕ್ಕೆ ಹಣಕ್ಕಿಂತ ಜ್ಞಾನದ ಅಗತ್ಯವಿದೆ. ಜ್ಞಾನದಿಂದ ಕಟ್ಟಿದ್ದು ಆತ್ಮತೃಪ್ತಿ ತರುತ್ತದೆ. ಇದು ಯಾವುದೇ ಲಿಂಗ ಬೇಧದಿಂದ ಸಾಧ್ಯವಿಲ್ಲ. ಶಿವಬೇರೆ ಶಕ್ತಿ ಬೇರೆಯೇ?
ಶಿವ ನಿರಂತರ ದ್ಯಾನದಲ್ಲಿದ್ದರೂ ಶಕ್ತಿಯ ಕಾರ್ಯ ನಿಲ್ಲದು.ಹೀಗಾಗಿ ಜ್ಞಾನವಿದ್ದರೆ ಆತ್ಮಶಕ್ತಿ ಜಾಗೃತವಾಗಿರುತ್ತದೆ. ಆ ಶಕ್ತಿಯನ್ನು ಬಿಟ್ಟು ರಾಜಕೀಯ ನಡೆಸಿದರೆ ಅತಂತ್ರಸ್ಥಿತಿ. ಈಗಲೂ ಎಷ್ಟೋ ಜನರಿಗೆ ತನ್ನ ಅರ್ಧ ಶಕ್ತಿಯ ಬಗ್ಗೆ ಅರಿವಿಲ್ಲದೆ ಪೂರ್ಣ ನನ್ನದೇ ಶಕ್ತಿ ಎನ್ನುವ ಅಹಂಕಾರ ದಿಂದ ಸ್ತ್ರೀ ಯನ್ನು ನಿರ್ಲಕ್ಷ್ಯ ಮಾಡಿ ಲಕ್ಷಲಕ್ಷ ಸಂಪಾದಿಸುತ್ತಾ ಅತೃಪ್ತಿ ಜೀವನ ನಡೆಸಿರೋದು ದುರಂತ ಕ್ಕೆ ಕಾರಣ. ಎಷ್ಟೇ ಹೊರಗೆ ಹೋರಾಟ ಮಾಡುತ್ತಾ ದೇಶ ಕಟ್ಟಲು ಸಹಕಾರ ಕೊಟ್ಟರೂ ಒಳಗಿರುವ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಲು ಸೋತರೆ ಮೆಟ್ಟುವವರೆ ಬೆಳೆಯೋದು. ಇದನ್ನು ನೇರವಾಗಿ ಯಾರೆಂದು ತಿಳಿಸಲಾಗದು.ಕಾರಣ ಇದು ಎಲ್ಲರ ಒಳಗೆ ಸುಪ್ತವಾಗಿರುವ ಗುಣವಾಗಿರುವಾಗ ಅದನ್ನು ಸರಿಪಡಿಸಿಕೊಂಡರೆ ಜ್ಞಾನೋದಯ ಸಾಧ್ಯವಿದೆ. ಎಲ್ಲರಲ್ಲಿಯೂ ಅಡಗಿರುವ ಆ ಪರಾಶಕ್ತಿ ಪರಮಾತ್ಮನಿಗೆ ನಮಸ್ಕರಿಸುತ್ತೇನೆ.
No comments:
Post a Comment