ಕಣ್ಣಿಗೆ ಕಂಡದ್ದೆಲ್ಲಾ ಸತ್ಯವಲ್ಲ.ಕಾಣದ ಸತ್ಯ ಅರ್ಥ ವಾಗಲ್ಲ. ಅಧ್ಯಾತ್ಮ ಭೌತಿಕ ಸತ್ಯದ ಹಿಂದೆ ಮುಂದೆ ನಡೆದಂತೆಲ್ಲಾ ಅರ್ಧ ಸತ್ಯವೇ ಬೆಳೆಯೋದು.
ತತ್ವಜ್ಞಾನಿಗಳಿಗೂ ತಂತ್ರಜ್ಞಾನಿಗಳಿಗೂ ಅಂತರ ಬೆಳೆದರೆ ಅದರಲ್ಲಿ ಅರ್ಧ ಸತ್ಯದ ರಾಜಕೀಯ ಹೆಚ್ಚಾದರೆ ಅತಂತ್ರ ಭಾರತ.ಆತ್ಮನಿರ್ಭರ ಭಾರತದ ಕನಸನ್ನು ಕಂಡವರಿಗೆ ಈಗಿನ ಪರಿಸ್ಥಿತಿ ಅರ್ಥ ಆಗದು. ಇಲ್ಲಿ ಆತ್ಮಜ್ಞಾನದಿಂದಾಗಬೇಕಾದ ಆತ್ಮನಿರ್ಭರ ತಂತ್ರಜ್ಞಾನದಿಂದ ಹೊರಗೆ ಬೆಳೆಯುತ್ತಾ ಹೊರಗೆ ಹೋದವರೆ ಹೆಚ್ಚಾದರೆ ಒಳಗಿರುವವರನ್ನು ಅರ್ಥ ಮಾಡಿಕೊಳ್ಳಲು ಕಷ್ಟ.
ಆತ್ಮ ಒಂದು ಅಗೋಚರ ಶಕ್ತಿ. ಭಾರತ ಒಂದು ದೇಶ.ಆ ದೇಶದೊಳಗಿನ ಅಸಂಖ್ಯಾತ ಅತೃಪ್ತ ಆತ್ಮಗಳು ತನ್ನ ಶಕ್ತಿ ಪ್ರದರ್ಶನ ಮಾಡಿದರೆ ಕುಣಿದು ಕುಪ್ಪಳಿಸುವವರಿಗೇನೂ ಕೊರತೆಯಿಲ್ಲ. ಅದೇ ತೃಪ್ತಿಯಿಂದ ಬದುಕುವ ಸಾಮಾನ್ಯ ಜನರನ್ನು ಹೆದರಿಸಿ ಬೆದರಿಸಿ ಮನೆಯಿಂದ ಹೊರಗೆ ತಂದು ಸಾಲದ ಮಡಿಲಿನಲ್ಲಿ ಮಲಗಿಸುವವರಿಗೂ ಕೊರತೆಯಿಲ್ಲ.
ಕೊರತೆಯಿರೋದು ಅಧ್ಯಾತ್ಮ ದ ಮೂಲ ಅರ್ಥ ತಿಳಿಯದೆ ಶಿಕ್ಷಣದಲ್ಲಿ ಮಕ್ಕಳಿಗೆ ತುಂಬಲಾಗುತ್ತಿರುವ ಅನಾವಶ್ಯಕ ವಿಷಯವನ್ನು ವಿರೋಧಿಸುವ ಪೋಷಕರಲ್ಲಿ. ದೇಶದ ಭವಿಷ್ಯ ಅದರ ಶಿಕ್ಷಣದಲ್ಲಿರುತ್ತದೆನ್ನುವುದು ಸತ್ಯ. ವಿದೇಶದಲ್ಲಿ ನ ಮಕ್ಕಳ ವಿದ್ಯಾಭ್ಯಾಸವು ಅವರ ಪ್ರತಿಭೆ ಜ್ಞಾನವನ್ನು ಅವಲಂಬಿಸಿರುತ್ತದೆನ್ನುವರು. ಆದರೆ ನಮ್ಮ ಭಾರತದಲ್ಲಿ ವಿದೇಶಿಗಳ ಜ್ಞಾನ ಭಾಷೆ,ಸಂಸ್ಕೃತಿ ಯನ್ನು ಎತ್ತಿ ಹಿಡಿಯುವುದೇ ಪ್ರಗತಿ ಎನ್ನುವ ಮಟ್ಟಿಗೆ ಶಿಕ್ಷಣ ಬೆಳೆದಿದೆ ಎಂದರೆ ಮೂಲ ಜ್ಞಾನವನ್ನು ಗುರುತಿಸದೆ ಹೊರಗಿನಿಂದ ಬೆಳೆಸಿದ್ದೇ ಆತ್ಮದುರ್ಭಲತೆಗೆ ಕಾರಣವೆಂದಾಯಿತು.
ಅಧ್ಯಾತ್ಮ ಪ್ರಚಾರವೆಂದರೆ ಪುರಾಣ ಇತಿಹಾಸದ ಕಥೆಗಳ ಪ್ರಚಾರವೋ , ಪೂಜೆ ಪುನಸ್ಕಾರ ಯಾಗ ಯಜ್ಞ ಹೋಮ ಹವನವೋ ಎಂದಾಗ ಸಾಕಷ್ಟು ವರ್ಷಗಳ ಕಾಲ ನಡೆಸಿರುವ ಇವುಗಳಿಂದ ಸತ್ಯಜ್ಞಾನ ಬೆಳೆಯಿತೆ? ಸತ್ಯವನ್ನು ಹೇಳುವುದರಿಂದ ಸಾಕಷ್ಟು ವಿರೋಧಿಗಳು ಜನ್ಮಪಡೆಯುವರೆಂದರೆ ಅಸತ್ಯದಿಂದ ಧರ್ಮ ಉಳಿಯಿತೆ?
ಎಲ್ಲೇ ಇದ್ದರೂ ಭೂಮಿಯ ಋಣ ಸಂದಾಯವಾಗೋದಕ್ಕೆ ಧರ್ಮ ದ ಜೊತೆಗೆ ಸತ್ಯವಿರಬೇಕೆಂದರು. ಸತ್ಯವಿಲ್ಲದ ಧರ್ಮ ಕುಂಟು ಧರ್ಮ ವೇ ಇಲ್ಲದ ಸತ್ಯ ಕುರುಡು.
ಇಲ್ಲಿ ಧರ್ಮದ ವಿಚಾರ ಬಂದರೆ ನಿಮ್ಮದು ಯಾವ ಧರ್ಮ? ಪಂಗಡ,ಜಾತಿ ..ಕುಲ ಗೋತ್ರ...ಪ್ರಶ್ನೆ ಏಳುತ್ತದೆ.ಆದರೆ ನೀವು ಯಾವ ಭೂಮಿಯಲ್ಲಿರುವಿರಿ? ಯಾವ ದೇಶದ ಋಣದಲ್ಲಿರುವಿರಿ? ಎಂದು ಪ್ರಶ್ನೆ ಮಾಡಿಕೊಂಡರೆ ಅದರ ಋಣ ತೀರಿಸಲು ಸತ್ಕರ್ಮ, ಸತ್ಸೇವೆ ಸದಾಚಾರ ಸತ್ಯ ದೆಡೆಗೆ ಆತ್ಮ ನಡೆಯಲೇಬೇಕು. ಸಾಧ್ಯವಿಲ್ಲ ವಾದರೆ ಪ್ರಚಾರಯಾಕೆ? ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರಿಲ್ಲ. ಅದಕ್ಕಿಂತ ಮೌನವಾಗಿದ್ದು ತನ್ನ ಆಂತರಾತ್ಮನ ಕರೆಗೆ ಓಗೊಟ್ಟು ನಡೆಯುವುದೇ ಶ್ರೇಯಸ್ಕರ.
ಕಲಿಯುಗದಲ್ಲಿ ಹರಿನಾಮವ ನೆನೆದರೆ ಕುಲಕೋಟಿಗಳು ಉದ್ದರಿಸುವುದು...ಆದರೆ ಕುಲಕೋಟೆಗಳನ್ನು ಬಿಟ್ಟು ಹೊರಬಂದು ಜನರನ್ನು ಹೆದರಿಸುತ್ತಿದ್ದರೆ ಅನರ್ಥಕ್ಕೆ ಕಾರಣ.ಇದು ರಾಜಕೀಯದಿಂದ ಬೆಳೆದಿರುವಾಗ ರಾಜಕಾರಣಿಗಳಿಗೆ ಉತ್ತಮ ಜ್ಞಾನದ ಶಿಕ್ಷಣ ಕೊಟ್ಟು ದೇಶದ ಅಧಿಕಾರ ಕೊಡಿಸುವುದೇ ಧರ್ಮ ಕಾರ್ಯ ವಾಗಿತ್ತು. ಪ್ರಜಾಪ್ರಭುತ್ವ ಹದಗೆಟ್ಟಿದೆ ಎಂದರೆ ಪ್ರಜೆಗಳಿಗೆ ಸರಿಯಾದ ಶಿಕ್ಷಣ ಕೊಡುವಲ್ಲಿ ಸೋತಿದೆ ಎಂದರ್ಥ.
No comments:
Post a Comment