ದೇವರಿರೋದೆಲ್ಲಿ? ಒಳಗೋ ಹೊರಗೋ?
ರಾಮಾಯಣ ಮಹಾಭಾರತ ಭಗವದ್ಗೀತೆ ಯಂತಹ
ಮಹಾಗ್ರಂಥಗಳು ಇಂದು ಮಾನವನಿಗೆ ಜೀವನ ನಡೆಸಲು ಆಧಾರವಾಗಿದೆ. ಆಧಾರವಾಗಿದ್ದರೆ ಧರ್ಮ ಉಳಿಯುತ್ತಿತ್ತು ಅದನ್ನೇ ಆಹಾರವಾಗಿ ತಿಂದರೆ ಗ್ರಂಥ ಹೊಟ್ಟೆಗೆ ಹೋದರೂ ತಲೆಯೊಳಗೆ ಜ್ಞಾನವಿಲ್ಲದಿದ್ದರೆ ವ್ಯರ್ಥ.
ದೇವರೆಲ್ಲಿರುವುದು ಎನ್ನುವ ಪ್ರಶ್ನೆಗೆ ಉತ್ತರ ಹೊರಗೆ ಸಿಗದು.ಆದರೆ ಇಂದಿನ ಜನತೆ ಹೊರಗೇ ಹುಡುಕಿಕೊಂಡು ಕಾಣದೆ ಪರದಾಡುತ್ತಿರುವರು. ಸಾಲದೆನ್ನುವಂತೆ ಹೋರಾಟ ಹಾರಾಟ ಮಾರಾಟಕ್ಕೆ ಇಳಿದು ಒಳಗೇ ಇರುವ ಆತ್ಮಸಾಕ್ಷಿಗೆ ವಿರುದ್ದ ನಡೆದು ನ್ಯಾಯಾಲಯದವರೆಗೂ ದೇವರನ್ನು ಕರೆದುಕೊಂಡು ಹೋಗಿ ಇವನಿಗೊಂದು ದೇವಸ್ಥಾನ ಕಟ್ಟಲು ಅನುಮತಿ ಕೊಡಿ ಎಂದರೆ ನ್ಯಾಯಾಧೀಶರೆ ದೇವರಿಗಿಂತ ದೊಡ್ಡವರಾಗಿ ತೀರ್ಪು ನೀಡಲೇಬೇಕು.
ತೀರ್ಪು ಆಸ್ತಿಕ ನಾಸ್ತಿಕರಿಗೆ ಒಪ್ಪುವಂತೆ ಇರೋದು ಕಷ್ಟ. ಹೀಗಾಗಿ ನ್ಯಾಯಾಧೀಶರಾಗೋದು ಬಹಳ ಕಷ್ಟದ ಕೆಲಸ.
ದೇವರಾಗಿರೋದು ಕಷ್ಟ ಅಸುರರಾಗಿರೋದು ಸುಲಭ. ಹೀಗಾಗಿ ಇಂದು ದೇವರ ಹೆಸರಿನಲ್ಲಿ ಅಸುರರು ತಮ್ಮ ಸಾಮ್ರಾಜ್ಯ ಸ್ಥಾಪನೆ ಮಾಡಿಕೊಂಡು ತಾವೇ ದೇವರಂತೆ ನಟನೆ ಮಾಡಿದರೂ ಕೇಳೋರಿಲ್ಲದ ಪರಿಸ್ಥಿತಿಇದೆ. ಇದಕ್ಕೆ ಕಾರಣವೇ ಅಜ್ಞಾನ ವಾಗಿದೆ. ಎಲ್ಲಿ ಹುಡುಕಬೇಕು ಯಾವುದನ್ನು ಕೆದಕಬೇಕು ಯಾರನ್ನು ಕೇಳಬೇಕು ಯಾರನ್ನು ಬೆಳೆಸಬೇಕು? ಏನು ಬೇಡಬೇಕು? ಎಷ್ಟು ಕೊಡಬೇಕು? ಯಾವುದೂ ತಿಳಿಯದೆ ಹೊರಗೆ ಕಂಡದ್ದೇ ಸತ್ಯವೆಂದು ಹಿಂದೆ ನಡೆದರೆ ಹಿಂದೂಗಳಾಗೋದಿಲ್ಲ. ಹಿಂದಿನ ಮಹಾತ್ಮರು ದೇವರನ್ನು ಬೆಳೆಸಿಲ್ಲ ದೈವತ್ವ ಬೆಳೆಸಿಕೊಂಡು ಮುಂದೆ ನಡೆದರು. ಈಗ ಮಕ್ಕಳ ದೈವತ್ವಕ್ಕೆ ಬೆಲೆಕೊಡದ ಶಿಕ್ಷಣ ಮಕ್ಕಳನ್ನು ಆಳಲು ಹೊರಟಿದೆ. ಇದೇ ಮುಂದೆ ಪೋಷಕರನ್ನು ಗುರು ಹಿರಿಯರನ್ನು ಆಳುವಾಗ ಶಕ್ತಿಹೀನವಾದ ದೇಹಕ್ಕೆ ಏನೂ ಮಾಡಲಾಗದೆ ಸೋಲುತ್ತದೆ.
ಏನು ಕೊಡುವೆವೋ ಅದೇ ತಿರುಗಿ ಬರೋದು.
ಪುರಾಣಇತಿಹಾಸ ಓದಿಕೊಂಡು ವಾಸ್ತವದಲ್ಲಿ ಜೀವನ ನಡೆಸುವಾಗ ಸತ್ಯ ಮತ್ತು ಧರ್ಮ ದ ಅರಿವೇ ಮುಖ್ಯ.
ಸರ್ವಕಾಲಿಕ ಸತ್ಯವೇ ದೇವರು. ಅಂದರೆ ಅಂದು ಇಂದು ಮುಂದು ಇರುವ ಒಂದೇ ಭೂಮಿಯ ಮೇಲಿರುವ ಎಲ್ಲಾ ದೇವಾಸುರರಿಗೆ ಭೂಮಿ ಆಳೋದೇ ಗುರಿಯಾದರೆ ಭೂಮಿಗೆ ಅಸ್ತಿತ್ವ ಇಲ್ಲವೆ? ಧರ್ಮ ಸತ್ಯವಿಲ್ಲದೆ ಆಳಿದರೆ ಮಾರಿಯಾಗುವಳಷ್ಟೆ. ಇಷ್ಟು ತಿಳಿದರೆ ಸಾಕು ನಮ್ಮಲ್ಲಿ ಸಾಕಷ್ಟು ಜ್ಞಾನಸಂಪತ್ತಿದೆ.ಅದನ್ನು ಲೋಕಕಲ್ಯಾಣಕ್ಕಾಗಿ
ನಿಸ್ವಾರ್ಥ ನಿರಹಂಕಾರ ಮತ್ತು ಪ್ರತಿಫಲಾಪೇಕ್ಷೆ ಇಲ್ಲದೆ ಮಹಾತ್ಮರುಗಳು ಹಿಂದಿನ ಕಾಲದಲ್ಲಿ ನಡೆಸಿದ್ದರೆಂದರೆ ಅದರಲ್ಲಿ ಯೋಗವಿತ್ತು. ಯಾವಾಗಿದು ಭೋಗಕ್ಕೆ ಸೀಮಿತವಾಯಿತೋ ದೈವತ್ವಕುಸಿಯಿತು. ಹೀಗಾಗಿ ಭೂಮಿಯನ್ನು ದುರ್ಭಳಕೆ ಮಾಡಿಕೊಂಡು ಎಷ್ಟು ಹಣ ಅಧಿಕಾರ ಸ್ಥಾನಪಡೆದರೂ ಆತ್ಮಕ್ಕೆ ತೃಪ್ತಿ ಸಿಗದೆ ಋಣ ಕಳೆಯದೆಪಾಪಕ್ಕೆ ತಕ್ಕಂತೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪುನರ್ಜನ್ಮ ನಿಶ್ಚಿತ ಎಂದಿರುವರು.
ಧಾರ್ಮಿಕ ವರ್ಗ ಇದನ್ನರಿತಾಗಲೇ ಸಮಾಜದಲ್ಲಿ ಬದಲಾವಣೆ ಸಾಧ್ಯ. ಎಷ್ಟು ಮಂತ್ರ ತಂತ್ರ ಯಂತ್ರ ಬಳಸಿದರೂ ಸ್ವತಂತ್ರ ಜ್ಞಾನವಿಲ್ಲದಿದ್ದರೆ ಜೀವನ್ಮುಕ್ತಿ ಸಿಗದು.
ಎಲ್ಲವೂ ಪರಮಾತ್ಮನ ಇಚ್ಚೆಯಂತೆ ನಡೆಯುತ್ತದೆ ಎನ್ನುವರು.
ಹಾಗಾದರೆ ಪರಮಾತ್ಮ ಒಬ್ಬನೇ ಇಬ್ಬರೆ ಹಲವರೆ? ಎಲ್ಲರಲ್ಲಿಯೂ ಅಡಗಿರುವ ಆ ಒಂದೇ ಚೇತನಾಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ನಿರಾಕಾರದೆಡೆಗೆ ನಡೆದವರಿಗೆ ಸಾಧ್ಯವಾಗಿದೆ ಎಂದರೆ ಮಹಾತ್ಮರಿಗೆ ದೇವರ ದರ್ಶನ ಆಗಿದೆ . ಮಹಾತ್ಮರು ಇರೋದೆಲ್ಲಿ? ಒಳಗೋ ಹೊರಗೋ?
ಹೋರಾಟ ಹಾರಾಟ ಮಾರಾಟದಲ್ಲಿಯೇ ಮುಳುಗಿರುವ ಮನುಷ್ಯನಿಗೆ ತನ್ನೊಳಗೆ ಇರುವ ಆ ಮಹಾ ಆತ್ಮದ ದರ್ಶನ ಆಗದಿದ್ದರೆ ದೇವರಾದರೂ ಏನೂ ಮಾಡಲಾಗದು.
ಒಟ್ಟಿನಲ್ಲಿ ದೇವರು ಧರ್ಮ, ಜಾತಿ,ಪಂಗಡ,ಪಕ್ಷ,ದೇಶದೊಳಗೇ ಅಡಗಿದೆ. ದೇಶ ಒಂದೇ ಎನ್ನುವ ಸತ್ಯವರಿತರೆ ತನ್ನೊಳಗೆ ಇರುವ ದೈವತ್ವದೆಡೆಗೆ ಇರುವ ಒಂದೇ ದೇವರ ನಾಮಸ್ಮರಣೆಯಲ್ಲಿ ತನ್ನ ಕಾಯಕದಲ್ಲಿ ಕೈಲಾಸವನ್ನು ಕಾಣುತ್ತಾ ಸ್ವತಂತ್ರ ಜ್ಞಾನದಿಂದ ಸರಳವಾಗಿ ಇರುವ ದೇವರನ್ನು ಮಾನವಕಾಣಬಹುದು.
ಇದನ್ನು ತಿಳಿಸೋದು ಸುಲಭವಾದರೂ ಅದರಂತೆ ನಡೆಯೋದು ಬಹಳ ಕಷ್ಟದ ಕೆಲಸ.ಇದಕ್ಕಾಗಿ ನಾವು ಹೊರಗೆ ಬೆಳೆಸಿಕೊಂಡ ಅಸಂಖ್ಯಾತ ಜಾತಿ ಧರ್ಮ ದೇವರುಗಳ ತಂಟೆಗೆ ಹೋಗದೆ ರಾಜಕೀಯದಿಂದ ದೂರವಿದ್ದು ಪರಮಾತ್ಮ ನಮಗೆ ಕೊಟ್ಟಿರುವ ಧರ್ಮ ಕರ್ಮ ಕ್ಕೆ ಋಣಿಯಾಗಿ ಸತ್ಸೇವೆ ಸತ್ಸಂಗದಲ್ಲಿ ಜೀವನ ನಡೆಸಬೇಕು.
ಹಿಂದೆ ದಾಸ ಶರಣರು ಮಹಾತ್ಮರುಗಳು ಯೋಗದಿಂದ ದೇವರನ್ನು ಕಂಡಿದ್ದರೆ ಇಂದು ನಾವು ಭೋಗಕ್ಕಾಗಿ ದೇವರನ್ನು ಬೇಡುತ್ತಾ ಸಾಲದಲ್ಲಿ ಜೀವನ ನಡೆಸೋ ಪರಿಸ್ಥಿತಿ ತಂದುಕೊಂಡು ಅದೇ ದೇವರನ್ನು ಸಾಲ ತೀರಿಸಲು ಆಳಲು ಹೊರಟರೆ ದೇವರು ಕಾಣದಿದ್ದರೂ ಅಸುರರು ಬೆಳೆಯುವರು.
ರಾಜಕೀಯ ಸರಿಯಿಲ್ಲ ಎನ್ನುವ ಜನರಿಗೆ ರಾಜಕೀಯ ಎಂದರೆ ಏನೆಂಬ ಅರಿವಿದ್ದರೆ ಉತ್ತಮ.
ಇನ್ನೊಬ್ಬರನ್ನು ಆಳೋದೇ ರಾಜಕೀಯವಾಗಿರುವ ಇಂದು ತನ್ನ ತಾನರಿತು ನಡೆಯೋ ರಾಜಯೋಗದ ಅರಿವಿಲ್ಲದಿರೋದು ದುರಂತವಷ್ಟೆ.
ದೇವರಿದ್ದರೆ ಇಷ್ಟು ಭ್ರಷ್ಟಾಚಾರ ಹೇಗೆ ಬೆಳೆಯಿತು? ಇಷ್ಟು ಅಸುರಿಗುಣ ಮಾನವನಲ್ಲಿ ಹೇಗೆ ಮನೆಮಾಡಿತು?
ಇದಕ್ಕೆ ಕಾರಣ ಮಾನವನ ಅತಿಯಾದ ರಾಜಕೀಯ ಬುದ್ದಿ ಸ್ವಾರ್ಥ ಅಹಂಕಾರದ ವ್ಯವಹಾರಿಕ ಜ್ಞಾನ. ವ್ಯವಹಾರಕ್ಕೆ ಇಳಿದಾಗ ಹಣ ಮಾತ್ರ ಕಾಣೋದು ಜ್ಞಾನದ ದುರ್ಭಳಕೆ ಆದಷ್ಟೂ ಅಜ್ಞಾನ ಬೆಳೆಯುತ್ತದೆ. ಅಂದರೆ ಕಲಿಯುಗದಲ್ಲಿ ಕಲಿಕೆಯೇ ಅಸತ್ಯದೆಡೆಗೆ ನಡೆದಾಗ ತಲೆಗೆ ತುಂಬಿದ ವಿಷಯವೇ ಮಾನವನ ನಡೆ ನುಡಿಯಾಗಿ ನಾನೇ ದೇವರು ಎನ್ನುವ ಅರ್ಧ ಸತ್ಯದಲ್ಲಿ ತಾನೂ ಮುಂದೆ ಹೋಗದೆ ಅನ್ಯರನ್ನೂ ಸರಿದಾರಿಯಲ್ಲಿ ನಡೆಯಲು ಬಿಡದೆ ಮಧ್ಯೆ ನಿಂತು ಆಳೋದೇ ಸಾಧನೆ ಎನ್ನುವನು.
ಮಧ್ಯಮ ವರ್ಗ, ಮಾಧ್ಯಮ, ಮಾನವ, ಮಹಿಳೆ,ಮಕ್ಕಳ ಈ ಸ್ಥಿತಿಗೆ ಮೇಲಿರುವ ದೇವರು ಕಾರಣನೆ ಅಥವಾ ಕೆಳಗಿಳಿದ ಅಸುರರೆ?
ಇಬ್ಬರಿಗೂ ಒಂದೇ ಸ್ಥಾನಮಾನ ಕೊಟ್ಟು ಸಹಕರಿಸಿರುವ ಮನುಷ್ಯನೇ ಎಲ್ಲದ್ದಕ್ಕೂ ಕಾರಣವಾದಾಗ ಅದರ ಫಲವನ್ನು ಅವನೇ ಉಣ್ಣಬೇಕೆನ್ನುತ್ತದೆ ಕರ್ಮ ಸಿದ್ದಾಂತ.
ಸಿದ್ದರನ್ನು ಹಿಡಿದು ಯೋಗಿ ಯಾಗೋದು ಕಷ್ಟ.
ಆದರೆ ಅವರ ಹೆಸರನ್ನು ಹಿಡಿದು ತಾನೇ ಯೋಗಿ ಎಂದು ಪ್ರಸಿದ್ದರಾಗೋದು ಸುಲಭ. ಹಣ ಅಧಿಕಾರ ಸ್ಥಾನ ವಿದ್ದರೆ ಜನ ಬಲ ಹಣಬಲವೂ ಬೆಳೆದು ಅದೇ ಮುಂದೆ ದೇವರಿಲ್ಲ ನಾನೇ ಎಲ್ಲಾ ಎನ್ನುವ ಹಂತಕ್ಕೆ ತರುತ್ತದೆ.
ರಾಮಾಯಣ ದಿಂದ ರಾಮನ ನಡೆಯನ್ನು ಅರ್ಥ ಮಾಡಿಕೊಂಡು ಯೋಗಿಯಾಗಬಹುದು.ಶ್ರೀ ರಾಮಚಂದ್ರನ ಪ್ರಜಾಪರಿಪಾಲನೆ ಧರ್ಮ ಪರಿಪಾಲನೆ ಇಂದಿನ ಪ್ರಜಾಪ್ರಭುತ್ವದಲ್ಲಿ ಅರ್ಥ ಮಾಡಿಕೊಳ್ಳಲು ಸಾಮಾನ್ಯರಂತೆ ಬದುಕಿರಬೇಕಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಾಮಾನ್ಯ ಪ್ರಜೆಗಳೇ ಹೀಗಿರುವಾಗ ಇಲ್ಲಿ ರಾಜರು ಯಾರು?
ರಾಮರಾಜ್ಯದ ಹೆಸರಿನಲ್ಲಿ ಎಷ್ಟು ದೇವಸ್ಥಾನಕಟ್ಟಿದರೂ ದೈವತ್ವದ ಶಿಕ್ಷಣ ನೀಡದೆ ಜನರನ್ನು ದಾರಿತಪ್ಪಿಸಿ ಆಳಿದರೆ ಅಧರ್ಮ ಕ್ಕೆ ಜಯ.
ಇದನ್ನು ಪ್ರಗತಿಪರ ಎನ್ನುವವರು ಅರ್ಥ ಮಾಡಿಕೊಳ್ಳಲು ಕಷ್ಟ.ಕಾರಣ ಜನರೆ ಅವರನ್ನು ಎತ್ತಿ ಏಣಿಗೇರಿಸಿ ಮೇಲಕ್ಕೆ ಕೂರಿಸಿ ಅಧಿಕಾರ ಕೊಟ್ಟಿರುವಾಗ ಹೊರಗೆ ತಳುಕುಬಳುಕಿನ ಜೀವನ. ಒಳಗಿರುವ ಅಸಮಾನತೆಯ ಶಿಕ್ಷಣ ಜ್ಞಾನ, ಅಜ್ಞಾನದ ಭೋಗದ ಜೀವನದಲ್ಲಿ ದೇವರು ಕಾಣೋದಿಲ್ಲ. ಹೀಗಾಗಿ ದೇವರನ್ನು ಆಳೋದಕ್ಕೆ ಜನರನ್ನು ಬಳಸುವರು. ಸತ್ಯವೇ ದೇವರೆನ್ನುವರು,ಧರ್ಮ ವೇ ದೇವರೆನ್ನುವರು, ಹಾಗಾದರೆ ಸತ್ಯ ಎಲ್ಲಿದೆ ಧರ್ಮ ಎಲ್ಲಿದೆ ಎನ್ನುವ ಪ್ರಶ್ನೆಗೆ ಉತ್ತರ ಹೊರಗೆ ಹುಡುಕಿದರೆ ಸಿಗದು.
ಆತ್ಮಾವಲೋಕನದಿಂದ ಅಧ್ಯಾತ್ಮ ಸಂಶೋದನೆ ಮಾಡಿಕೊಂಡರೆ ವಾಸ್ತವದಲ್ಲಿ ನಾವೆತ್ತ ಸಾಗಿದ್ದೇವೆನ್ನುವುದು ಒಳಗೇ ಅರ್ಥ ವಾಗುತ್ತದೆ. ನಮ್ಮದೇ ಸಹಕಾರದಿಂದ ಬೆಳೆದಿರುವ ದೇವಾಸುರರು ನಮಗೇ ಕಾಣದಿದ್ದರೆ ಏನರ್ಥ?
ಈ ಪೋಸ್ಟ್ ಹಂಚಿಕೊಳ್ಳಲು ನಮಗೆ ದೇವರು ಮನಸ್ಸು ಕೊಡಬೇಕು. ಅಸುರರು ಒಳ್ಳೆಯದಕ್ಕೆ ಸಹಕರಿಸೋದಿಲ್ಲ ಹೀಗಾಗಿ ಸತ್ಯ ಹಿಂದುಳಿದು ಮಿಥ್ಯ ಹೊರಗೆ ಓಡುತ್ತಿದೆ.
ಎಷ್ಟು ಓಡಿದರೂ ಒಂದೇ ಸತ್ಯದಡಿ ನಿಲ್ಲಬೇಕೆನ್ನುವುದು ಪರಮಾತ್ಮನ ಇಚ್ಚೆ.
ಹಣ ಅಧಿಕಾರ ಸ್ಥಾನವಿದ್ದರೆ ದೇವರಾಗುವರೆ? ಇಲ್ಲದಿದ್ದರೆ ಮಾನವರೆ? ಹಾಗಾದರೆ ಅಸುರರು ಯಾರು? ಉತ್ತರ ತಿಳಿದವರು ತಿಳಿಸಬಹುದು..ಕಾರಣ ಉತ್ತರ ತಿಳಿದೂ ತಿಳಿಸದೆ ಅಸುರರ ಹಿಂದೆ ನಡೆದವರಿಗೆ ದೇವರು ಕಂಡಿಲ್ಲ. ಅಧಿಕಾರ ಸ್ಥಾನ ಹಣ ಸಿಕ್ಕಿದೆಯಷ್ಟೆ.
No comments:
Post a Comment