ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Friday, December 19, 2025

ಎಳ್ಳಮಾವಾಸ್ಯೆ

*✒️ಇಂದಿನ ನುಡಿ*

*ಈ ದಕ್ಷಿಣಾಯನ ಮಾರ್ಗಶಿರ ಮಾಸದ ಈ ದಿನ ಎಳ್ಳಮಾವಾಸ್ಯೆಯ ದಿನ.ಋಣ ತೀರಿಸುವ ದಿನ.ದೇವ ಋಣ,ಪಿತೃ ಋಣ,ಋಷಿ ಋಣ,ಮನುಷ್ಯ ಋಣ,ಭೂತದೈವಗಳಪ್ರಾಣಿ ಪಕ್ಷಿ ಪ್ರಕೃತಿಯ ಋಣ ನಮ್ಮ ಮೇಲಿದೆ.ಎಲ್ಲವನ್ನೂ ಉಪಯೋಗಿಸಿಕೊಂಡು ಈ ಭೂಮಿ ಮೇಲೆ ಜೀವಿಸುವವರು ನಾವು.ಬದುಕಿದರೆ ಸಾಕೇ?ಸಹಕಾರ ಪಡೆದದ್ದಕ್ಕೆ ಕೃತಘ್ನರಾಗದೆ,ಉಪಕಾರಕ್ಕೆ ಪ್ರತ್ಯುಪಕಾರ, ಕೃತಜ್ಞತಾ ಸಮರ್ಪಣೆ ಮೂಲಕ ಸ್ಮರಿಸುವ ಕೆಲಸವಾಗಬೇಕು.ರೈತಾಪಿ ವರ್ಗದವರಿಗೆ ಎಳ್ಳು,ನೆಲಕಡಲೆ ಫಸಲು ಮನೆಯಂಗಳಕೆ ಬಂದ ದಿನಗಳಿವು.ಭೂಮಿ ತಾಯಿಗೆ ಕೃತಜ್ಞತೆ ಸಮರ್ಪಿಸುವರು.ಎಳ್ಳು ಬೆಲ್ಲವನ್ನು ಬೆರೆಸಿ ಹೊಲಕ್ಕೆ ಚೆಲ್ಲುವರು(ಚರಗ ಚೆಲ್ಲುವುದೆನ್ನುವರು)ಮಣ್ಣನ್ನು ಮೃದುವಾಗಿಸುವ ಎರೆಹುಳಗಳು ಹೊಲದ ಮಣ್ಣಲ್ಲಿರುವುದು.ಹಾಗೆಯೇ ಬೆಳೆ ನಾಶ ಮಾಡುವ ಕಾಯಿಕೊರಕ ಹುಳಗಳನ್ನು  ಎಳ್ಳು ಬೆಲ್ಲದೊಂದಿಗೆ ತಿನ್ನುವ ಕೆಲಸವನ್ನು ಪಕ್ಷಿಸಂಕುಲ ಮಾಡುವುದು.ಹಬ್ಬ,ಆಚರಣೆಗಳ ಹಿಂದೆ ಇಂತಹ ವೈಜ್ಞಾನಿಕ ಕಾರಣಗಳು ಸಹ ಇದೆ.ನಮ್ಮ ಹಿರಿಯರು ಬುದ್ಧಿವಂತರು.ಐದು ಪಾಂಡವರ ಕಲ್ಲುಗಳನ್ನು ಇಟ್ಟು ,ತಾವು ತಂದ ವಿಶೇಷ ಖಾದ್ಯಗಳನ್ನು ಭೂಮಿತಾಯಿ ಸಹಿತ ನೈವೇದ್ಯ ಮಾಡಿ,ಬನ್ನಿ ಗಿಡ ನೆಟ್ಟು ಜೊತೆಗೆ ಪೂಜಿಸುವರು,ಮುಂದಿನ ದಿನಗಳಲ್ಲಿ ಅಧಿಕ ಫಸಲನ್ನು ನೀಡೆಂದು,ಶನಿದೋಷವಿದ್ದಲ್ಲಿ ಪರಿಹರಿಸೆಂದು ಪ್ರಾರ್ಥಿಸುತ್ತಾ ನಿವೇದಿಸಿಕೊಳ್ಳುವರು. ಈ ಮೂಲಕ ಕೃತಜ್ಞತೆ ಸಲ್ಲಿಸುವರು.ತಯಾರಿಸಿದ ವಿಶೇಷ ಅಡುಗೆಯನ್ನು ತಮ್ಮ ಎತ್ತಿನ ಬಂಡಿಯಲ್ಲಿಟ್ಟು,ಎತ್ತುಗಳನ್ನು ,ಗಾಡಿಯನ್ನು ಸಿಂಗರಿಸಿ,ಮನೆಮಂದಿಯೆಲ್ಲ ಚರಗ ಚೆಲ್ಲಿ ಪೂಜೆಯಾದ ಮೇಲೆ ಸಹಭೋಜನವನ್ನು ಪ್ರಸಾದರೂಪವಾಗಿ ಮಾಡುವರು.ಹೊಲ ಭೂಮಿ ರೈತರ ಬಾಂಧವ್ಯದ ಬೆಸುಗೆಯದು. ಎಲ್ಲೆಲ್ಲೋ ಇರುವ ಮನೆಯ ಸದಸ್ಯರೆಲ್ಲರೂ ಹಬ್ಬದ ಸಂದರ್ಭ ಒಟ್ಟು ಸೇರುವರು.ಹಾಗೆಯೇ ಇಂದು ಪಿತೃ ದೇವತೆಗಳ ಪ್ರೀತ್ಯರ್ಥ ಯಾಂತ್ರಿಕತೆ,ತೋರಿಕೆಯನ್ನು ಬಿಟ್ಟು ಶ್ರದ್ಧಾಭಕ್ತಿಯಿಂದ ಶ್ರಾದ್ಧ,ತಿಲತರ್ಪಣ,ಸತ್ಪಾತ್ರರಿಗೆ ಅನ್ನದಾನ,ಎಳ್ಳುದಾನ ಕೈಂಕರ್ಯಗಳನ್ನು ಮಾಡಬೇಕು.ಸಕಲ ವಿಧದ ಮಂಗಲವು ಉಂಟಾಗುವುದೆಂಬ ನಂಬಿಕೆ.ಸಮುದ್ರ,ನದಿ ಸ್ನಾನವನ್ನೂ ಮಾಡುವರು.ಸಮುದ್ರ ಸ್ನಾನವೆಂಬುದು ಚರ್ಮರೋಗಗಳ ನಿವಾರಣೆಗೂ ಕಾರಣವಾಗಬಹುದು.ಪಿತೃಗಳು ಸಂತುಷ್ಟರಾಗಿ ಹರಸುವರೆಂಬ ವಿಶ್ವಾಸ ಹಿರಿಯರ ಕಾಲದಿಂದಲೂ ಇದೆ.ಪೌರಾಣಿಕವಾಗಿ ನೋಡಿದರೆ ಮಹಾಭಾರತ ದಲ್ಲಿ ಕುರುಕ್ಷೇತ್ರ ಯುದ್ಧದಲ್ಲಿ ಮಡಿದವರಿಗೆಲ್ಲ ಈ ಶುಭದಿನದಂದು ತರ್ಪಣ ನೀಡಿ,ಅನ್ನದಾನ ಮಾಡಿದ್ದರಂತೆ.ಕುಟುಂಬದಲ್ಲಿ ಅಳಿದ ಪಿತೃಗಳನ್ನು ಸಂತೃಪ್ತಿಗೊಳಿಸುವ ಪದ್ಧತಿಯಿದೆ.ಇನ್ನೊಂದು ರೀತಿಯಲ್ಲಿ ತಂದೆ ಜಮದಗ್ನಿಯ ಆಣತಿಯಂತೆ ಹೆತ್ತಮ್ಮ ರೇಣುಕೆಯ ಶಿರ ಕತ್ತರಿಸಿದವ ಪರಶುಧರ ಭಾರ್ಗವ ರಾಮ.ಕೊಡಲಿಯ ಬಾಯಿಗಂಟಿದ ರಕ್ತ ಯಾವ ನದಿಯಲ್ಲಿ ತೊಳೆದರೂ ಒಂದು ಬಿಂದು ಉಳಿಯುತ್ತಿತ್ತಂತೆ.ಕೊನೆಗೆ ತುಂಗಾನದಿಯಲ್ಲಿ ಮುಳುಗಿಸಿದಾಗ ಕಲೆ ಹೋಯಿತಂತೆ.ಹಾಗಾಗಿ ಅದೇ ಸ್ಥಳ ಶಿವಮೊಗ್ಗ ಸಮೀಪದ 'ತೀರ್ಥಹಳ್ಳಿ'ಯೆಂದು ಪ್ರಸಿದ್ಧಿಯಾಯಿತೆಂದೂ,ಅಲ್ಲಿ ನದಿ ಸ್ನಾನ ಮಾಡಿ ಪುನೀತರಾಗುತ್ತಾರೆಂದೂ ಉಲ್ಲೇಖವಿದೆ.ಹೆತ್ತವರ ಋಣ ತೀರಿಸಲಾಗದಂತೆ.ಈ ರೀತಿಯಲ್ಲಾದರೂ ಸ್ವಲ್ಪಾಂಶ ತೀರಿಸಿ ಪುಣ್ಯ ಕಟ್ಟಿಕೊಳ್ಳೋಣ.*
.🤝🙏*(ಸಂಗ್ರಹ)*
೧೯-೧೨-೨೫
*✍️ರತ್ನಾ ಕೆ ಭಟ್*

No comments:

Post a Comment