ಬೇಜವಾಬ್ದಾರಿ ಮಾನವನಿಗೆ ಭೂಮಿಯಲ್ಲಿ ಬೆಲೆಯಿಲ್ಲವೆ.
ಭೂಮಿಗೆ ಬಂದ ಉದ್ದೇಶ ಮರೆತು ಭೂಮಿಯನ್ನೇ ಆಳಲು ಹೊರಟರೆ ಸುಖವೆಲ್ಲಿರುತ್ತದೆ? ಜವಾಬ್ದಾರಿ ಹೊತ್ತು ನಡೆದವನಿಗೆ ಸುಖವೇ ಎಲ್ಲಾ ಎಂದರು ಆದರೆ ಇಲ್ಲಿ ಸುಖ ಯಾರಿಗಿದೆ?ಇಲ್ಲಿ ಜವಾಬ್ದಾರಿ ಎನ್ನುವ ಪದದಲ್ಲಿ ನಮ್ಮ ಕರ್ಮ ಯೋಗವಿದೆ. ಯಾವಾಗ ಮಾನವ ತನ್ನ ಜೀವನದ ಉದ್ದೇಶ ತಿಳಿದು ತನಗೆ ಸಿಕ್ಕ ಜ್ಞಾನದಿಂದ ಜವಾಬ್ದಾರಿಯುತ ಕೆಲಸ ಮಾಡಿ ಮುಂದೆ ನಡೆಯುವನೋ ಆಗ ಎಲ್ಲಾ ರೀತಿಯ ಸಹಕಾರ ಸಿಗುತ್ತದೆ. ಆದರೆ ಇದರಿಂದ ಲೋಕ ಕಂಟಕರು ಹೆಚ್ಚಾದರೆ ಅಂತಹ ಜವಾಬ್ದಾರಿಯಿಂದ ದೂರವಿರುವುದೇ ಉತ್ತಮ ಮಾರ್ಗ.
ಮನೆ ಮಠ,ಮಂದಿರ,ಮಾಧ್ಯಮ,ಮಹಿಳೆ,ಮಕ್ಕಳ ಜವಾಬ್ದಾರಿ ಸಾಮಾನ್ಯವಾಗಿ ಸಂಸಾರದಲ್ಲಿರುವವರಿಗೆಲ್ಲರಿಗೂ
ಇರುತ್ತದೆ. ಕಾರಣವಿಷ್ಟೆ ಇಡೀ ವಿಶ್ವಶಕ್ತಿಯ ಅಂಶವುಳ್ಳ ಮಾನವರಿಗೆ ಇಡೀ ಜಗತ್ತಿನ ಅರಿವಿಲ್ಲವಾದರೂ ತನ್ನ ಸುತ್ತಮುತ್ತಲಿನ ಜನರ ಬಗ್ಗೆ ತಿಳಿದು ನಡೆಯುವ ಜ್ಞಾನವಿರುತ್ತದೆ. ತನ್ನ ಮನೆಯ ಜವಾಬ್ದಾರಿಯನ್ನು ಇನ್ನಾರೋ ಹೊರಗಿನವರು ಹೊತ್ತುಕೊಳ್ಳಲಿ ಎನ್ನುವ ಹಾಗಿಲ್ಲ
ಮನೆಯೊಳಗಿನ ಕೆಲಸ ಮನೆಯೊಳಗೆ ಮಾಡದೆ ಹೊರಗೆ ಮಾಡಿದರೆ ಹೇಗಿರಬಹುದು? ಹಾಗೆ ಮನೆಯ ಜವಾಬ್ದಾರಿ ಬಿಟ್ಟು ಹೊರಗಿನ ಜವಾಬ್ದಾರಿಯತ್ತ ಮಾನವ ನಡೆದಷ್ಟೂ ಮೂಲಕ್ಕೆ ತಿರುಗಿ ಬರೋದು ಕಷ್ಟ. ಯಾರು ಒಳಗೆ ಹಾಗು ಹೊರಗಿನ ಜವಾಬ್ದಾರಿಯನ್ನು ಸರಿಸಮನಾಗಿ ನೋಡಿ
ಕೊಂಡು ಜೀವನ ನಡೆಯುವರೋ ಅವರು ನಿಜವಾದ ಸಾಧಕರಾಗುತ್ತಾರೆ.
ಹಲವರು ವಿದೇಶದಲ್ಲಿದ್ದು ಸ್ವದೇಶದ ಜನತೆಗೆ ಪರಿಹಾರ ಕೊಡುತ್ತಾರೆ. ಇದು ಕೇವಲ ಹೆಸರು,ಸ್ಥಾನಮಾನಕ್ಕೆ ಸೀಮಿತವಾಗುತ್ತದೆ. ಒಳಹೊಕ್ಕಿ ಸತ್ಯ ತಿಳಿದು ಪರಿಹಾರ ಕಂಡುಕೊಳ್ಳಲು ನಾವು ಮೊದಲು ಸ್ವದೇಶಿಗಳಾಗಬೇಕಿದೆ.
ಹಾಗೆಯೇ ಮನೆಯೊಳಗಿನ ಸಮಸ್ಯೆಗೆ ಸರ್ಕಾರ ಪರಿಹಾರ ಧನ ನೀಡಿದರೂ ಅದೊಂದು ರಾಜಕೀಯವಾಗಿ ಸಾಲವಾಗಿ ತಿರುಗಿ ಇನ್ನೊಂದು ಸಮಸ್ಯೆಗೆ ಕಾರಣವಾಗಬಹುದು. ಅನಾವಶ್ಯಕವಾದ ಜವಾಬ್ದಾರಿಯನ್ನು ಹೊತ್ತುಕೊಂಡರೆ ಬಹಳ ಶ್ರಮಪಡಬೇಕು. ಶ್ರಮಪಟ್ಟರೂ ಯಾರಜವಾಬ್ದಾರಿ ನಾವು ಹೋತ್ತಿದ್ದೇವೆನ್ನುವ ಬಗ್ಗೆ ಅರಿವಿರಬೇಕು. ಶತ್ರುಗಳ , ವಿರೋಧಿಗಳ, ಅಜ್ಞಾನಿಗಳ ಜವಾಬ್ದಾರಿ ಹೊತ್ತರೆ ಅಜ್ಞಾನವಷ್ಟೆ.
"ಎಲ್ಲರ ಮನೆಯ ದೋಸೆ ತೂತು" ಎಂದ ಮೇಲೆ ಆ ತೂತನ್ನು ಮುಚ್ಚುವ ಜವಾಬ್ದಾರಿ ಅವರೆ ಹೊತ್ತು ನಿಲ್ಲಬೇಕು.ಸಾಧ್ಯವಿಲ್ಲವಾದಾಗ ನಮ್ಮ ಜ್ಞಾನವನ್ನು ನಾವು ಸದ್ಬಳಕೆ ಮಾಡಿಕೊಂಡು ಮುಂದೆ ನಡೆಯಬೇಕಷ್ಟೆ. ಹಿಂದಿನ ಎಷ್ಟೋ ಸಾದು,ಸಂತ,ದಾಸ,ಶರಣರು ಸಂಸಾರದ ನಂತರ ಸಂನ್ಯಾಸ ಪಡೆದರು. ಈಗ ಸಂಸಾರಿಗಳ ಕೈಕೆಳಗಿದ್ದು ಸಂನ್ಯಾಸಿ ಎನ್ನುವ ಮಟ್ಟಿಗೆ ಬಂದು ಸಂಸಾರಿಗಳ ಸಮಸ್ಯೆಗೆ ಅವರೆ ಕಾರಣರೆನ್ನುವ ಮಟ್ಟಿಗೆ ಬೆಳೆದಿರೋದು ದೊಡ್ಡ ದುರಂತ. ಎಲ್ಲಿಯವರೆಗೆ ವ್ಯವಹಾರದೊಳಗಿರುವುದೋ ಜೀವ ಅಲ್ಲಿಯವರೆಗೆ ಸಾಲ ತೀರದು.ಸಾಲ ತೀರದೆ ಜವಾಬ್ದಾರಿ ಇಳಿಯದು. ದೇಶದೊಳಗೆ ಇದ್ದು ಎಲ್ಲಾ ದೇಶದ ಸಂಪತ್ತು ಬಳಸಿಕೊಂಡು ನನಗೂ ದೇಶಕ್ಕೂ ಸಂಬಂದ ಇಲ್ಲ ಎಂದರೆ ಅಜ್ಞಾನ. ಹೀಗಾಗಿ ಸಣ್ಣ ಸಣ್ಣ ಸಂಸಾರದಲ್ಲಿಯೂ ಸಾಕಷ್ಟು ಜವಾಬ್ದಾರಿ ಹೆಚ್ಚುತ್ತಿದೆ.
ಇಲ್ಲಿ ಸಂನ್ಯಾಸಿಗೆ ಸಂಸಾರವಿಲ್ಲವಾದರೂ ಸಮಾಜದ ಮಧ್ಯೆ ಇದ್ದಾಗ ಇಡೀ ಸಮಾಜವೇ ಅವನಿಗೆ ಸಂಸಾರವಾಗುತ್ತದೆ. ಆಗ ಯಾವ ಬೇಧಭಾವವಿಲ್ಲದೆ ಅದರ ಜವಾಬ್ದಾರಿ ಹೊತ್ತು ನಡೆಯುವುದು ಬಹಳ ಕಷ್ಟ.ಸಂಸಾರಿಗೆ ಒಂದು ಚೌಕಟ್ಟು ಇರುತ್ತದೆ.ಆದರೆ ಸಂನ್ಯಾಸಿಗಿಲ್ಲ. ಯಾವಾಗ ಸಂನ್ಯಾಸಿಯೂ ಒಂದು ಚೌಕಟ್ಟಿನಲ್ಲಿ ಬಂಧಿಯಾಗುವನೋ ಆಗಲೇ ಅಧರ್ಮ ಹೆಚ್ಚುವುದು. ಒಬ್ಬ ರಾಜಕಾರಣಿಗೂ ರಾಜಯೋಗಿಗೂ ವ್ಯತ್ಯಾಸವಿದೆ. ರಾಜಕಾರಣಿ ಜನರಬಲ
ದಿಂದ ನಡೆದರೆ ರಾಜಯೋಗಿ ಜ್ಞಾನದ ಬಲದಿಂದ ನಡೆಯುತ್ತಾನೆ. ಜವಾಬ್ದಾರಿ ರಾಜಯೋಗದಲ್ಲಿದ್ದರೆ ಹೆಚ್ಚು ಲೋಕಕಲ್ಯಾಣವಾಗುತ್ತದೆನ್ನಬಹುದು. ರಾಜಯೋಗಿಯೆನಿಸಿಕೊಂಡವನು ರಾಜಕಾರಣಿಯ ಕೆಳಗೆ ನಿಂತು ಬೇಡೋ ಪರಿಸ್ಥಿತಿ ಬರಬಾರದು. ಇದೊಂದು ಅಜ್ಞಾನ.ಅಜ್ಞಾನವೆಂದರೆ ತಪ್ಪಾದ ತಿಳುವಳಿಕೆಯೆಂದರೆ ಸರಿಯಾಗಬಹುದು.ಹೆಚ್ಚು ಓದಿದವರಿಗಿಂತ ಹೆಚ್ಚು ತಿಳಿದವರೆ ದೊಡ್ಡ ದೊಡ್ಡ ಜವಾಬ್ದಾರಿಯನ್ನು ಹೋರಲು ಸಾಧ್ಯವಾದರೂ ಭಾರತದಲ್ಲಿನ ಇಂದಿನ ಸ್ಥಿತಿಗೆ ಕಾರಣವೇ ಹೆಚ್ಚು ಡಿಗ್ರಿ ಪಡೆದವರನ್ನು ಮೇಲೇರಿಸಿ ನಿಜವಾದ ಜವಾಬ್ದಾರಿಯುತ ಪ್ರಜೆಗಳನ್ನು ಗುರುತಿಸದೆ ಆಳುತ್ತಿರುವ ಸರ್ಕಾರ. ವಿದೇಶಕ್ಕೆ ಹೋಗಲು ಆಂಗ್ಲ ಭಾಷೆಯ ಅಗತ್ಯವಿದೆ. ಸ್ವದೇಶದಲ್ಲಿರಲು ಮಾತೃಭಾಷೆಯ ಅಗತ್ಯವಿದೆ. ವಿದೇಶಿಗಳನ್ನು ದೇಶದೊಳಗೆ ಕರೆಸಿಕೊಂಡು ದೇಶದಲ್ಲೇ ಇದ್ದ ಜ್ಞಾನಿಗಳನ್ನು ವಿದೇಶಕ್ಕೆ ಕಳಿಸಿದರೆ ಸಾಧನೆಯೆ?ಮನೆಯೊಳಗಿದ್ದವರನ್ನು ಹೊರಹಾಕಿ ಹೊರಗಿನವರನ್ನು ಮನೆಗೆ ಕರೆತಂದರೆ ಅವರು ನಮ್ಮ ಜವಾಬ್ದಾರಿ ಹೋರಲು ಸಾಧ್ಯವೆ? ಅತಿಥಿ ಸತ್ಕಾರ ಇರಲಿ, ಆದರೆ ನಮ್ಮವರನ್ನೇ ಓಡಿಸಿ ತಿಥಿ ಮಾಡುವಂತಾಗದಿರಲಿ. ಇಂತಹ ಸರಳ ಸತ್ಯದ ವಿಚಾರಕ್ಕೆ ಯಾವುದೇ ವೇದ ಪುರಾಣ ಇತಿಹಾಸದ ಪ್ರಚಾರ ಬೇಡ.ಯಾವ ರಾಜಕೀಯದ ಅಗತ್ಯವಿಲ್ಲ.ನಮ್ಮ ಜೀವನ ನಡೆಸಲು ನಮ್ಮ ಜವಾಬ್ದಾರಿಯನ್ನು ಹೊತ್ತು ನಡೆಯಲು ನಮ್ಮಲ್ಲಿ ಜ್ಞಾನಬಲ ಬೇಕಷ್ಟೆ ಇದರ ಜವಾಬ್ದಾರಿಯನ್ನು ಧಾರ್ಮಿಕ, ಶೈಕ್ಷಣಿಕ,ಸಾಹಿತ್ಯದ ಕ್ಷೇತ್ರಗಳು ಹೋರದೆ ರಾಜಕೀಯ ಕ್ಷೇತ್ರಕ್ಕೆ ಬಿಟ್ಟ ಪರಿಣಾಮವೇ ಬೇಜವಾಬ್ದಾರಿ
ಯುತ ವಿದೇಶ ವ್ಯಾಮೋಹದ ಮಿತಿಮೀರಿದ ಆಸೆ ಆಕಾಂಕ್ಷೆಗಳನ್ನು ಹೊತ್ತು ಸಾಲವನ್ನು ಶೂಲವಾಗಿಸಿಕೊಂಡಿ
ರುವ ಅಕ್ಷರ ಜ್ಞಾನ. ಕ್ಷಯವಾಗದ ಜ್ಞಾನವನ್ನು ಕೊಡದೆ
ಇನ್ನಷ್ಟು ಸಮಸ್ಯೆಯನ್ನು ಜವಾಬ್ದಾರಿಯನ್ನು ಹೆಚ್ಚಿಸುವ. ಶಿಕ್ಷಣದಿಂದ ಮಾನವನಿಗೆ ನಿಜವಾದ ಶಾಂತಿ ನೆಮ್ಮದಿ ತೃಪ್ತಿ ಸಿಗಲು ಸಾಧ್ಯವೆ?
ಈ ವಿಚಾರದ ಬಗ್ಗೆ ಚರ್ಚೆ ಮಾಡಿದರೂ ಎಲ್ಲರೂ ಅವರವರ ಜವಾಬ್ದಾರಿಯನ್ನು ಹೊತ್ತುಕೊಂಡು ನಡೆಯಲೇಬೇಕಿದೆ. ಇದನ್ನು ಸರ್ಕಾರವಾಗಲಿ,ದೇಶವಾಗಲಿ,ವಿದೇಶವಾಗಲಿ,
ದೇವರಾಗಲಿ ಅನುಭವಿಸಲಾಗದು. ಹೀಗಾಗಿ ಸಣ್ಣ ಪುಟ್ಟ ವಿಷಯಗಳನ್ನು ಹೊರತಂದುಹೋರಾಟ,ಹಾರಾಟ,ಮಾರಾಟ
ಮಾಡಿ ರಾಣ ರಂಪ ಮಾಡಿಕೊಂಡು ಇನ್ನಷ್ಟು ಜವಾಬ್ದಾರಿ ಹೊತ್ತುಹೋಗುವ ಬದಲಾಗಿ ನಮ್ಮ ಮನೆಯ ಶಾಂತಿ ಸಮಾಧಾನ ಸಂತೋಷಕ್ಕಾಗಿ ನಮ್ಮೊಳಗೇ ಅಡಗಿರುವ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಲು ಒಗ್ಗಟ್ಟಾದರೆ ಜವಾಬ್ದಾರಿಯಿಂದ ಮುಕ್ತಿ ಪಡೆಯಬಹುದು.
ಎಂತೆಂತಹ ಮಹಾರಾಜರು ಮಹಾತ್ಮರುಗಳು ಕೊನೆಗಾಲ
ದಲ್ಲಿ ಎಲ್ಲಾ ಭೌತಿಕ ಸಂಪತ್ತು ಬಿಟ್ಟು ಅಧ್ಯಾತ್ಮ ಸಂಪತ್ತಿನೆಡೆಗೆ ಹೊರಟರು ಕಾರಣ ಯಾವುದೇ ಭೌತಿಕದ ಜವಾಬ್ದಾರಿ ಮಾನವನಿಗೆ ಶಾಂತಿ ಕೊಡಲಾಗದು. ಹಾಗಂತ ಕ್ಷತ್ರಿಯರಾದವರು ದೇಶದ ರಕ್ಷಣೆಗಾಗಿ ಧರ್ಮದಿಂದ ತಮ್ಮ ಅಧಿಕಾರವನ್ನು ಪಡೆದು ಜವಾಬ್ದಾರಿಯುತ ಪ್ರಜೆಗಳಿಗೆ ಸಹಕರಿಸುವುದು ಉತ್ತಮ.ಹಾಗೆ ನಿಜವಾದ ಧಾರ್ಮಿಕ ಮುಖಂಡರುಗಳು,ಶಿಕ್ಷಕರು ದೇಶದ ಭವಿಷ್ಯಕ್ಕಾಗಿ ಮೂಲದ ಜ್ಞಾನಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟು ಜನರಿಗೆ ನಿಸ್ವಾರ್ಥ ದಿಂದ ಸಹಕರಿಸುವ ಜವಾಬ್ದಾರಿ ಇದೆ. ಇದೇ ರೀತಿ ಆರ್ಥಿಕ ವ್ಯವಸ್ಥೆ ಯು ವಿದೇಶಿಬಂಡವಾಳ,ಸಾಲ,ವ್ಯವಹಾರದಿಂದ ಮುಂದೆ ನಡೆಸದೆ ಸ್ವದೇಶದ ಸ್ವಾವಲಂಬನೆ ಆತ್ಮರಕ್ಷಣೆ,
ದೇಶರಕ್ಷಣೆಯ ಕಡೆಗೆ ನಡೆಸಬೇಕಿದೆ. ಹಣವನ್ನು ಸದ್ಬಳಕೆ ಮಾಡಿಕೊಳ್ಳಲು ಸತ್ಯಜ್ಞಾನದ ಶಿಕ್ಷಣವಿರಬೇಕಿತ್ತು.
ಸಾಮಾಜಿಕ ಸಮಾನತೆಯು ಜ್ಞಾನದ ಆಧಾರದಲ್ಲಿದ್ದರೆ ಎಲ್ಲಾ ಕ್ಷೇತ್ರದಲ್ಲೂ ಸರ್ಕಾರದ ಸೇವೆ ದೇಶಸೇವೆ ಎನ್ನುವ ಮಂತ್ರದ ಅರಿವಿನಲ್ಲಿ ನಡೆಯುತ್ತಿತ್ತು. ವಿಪರ್ಯಾಸವೆಂದರೆ ದೇಶದ ಶಿಕ್ಷಣ ವ್ಯವಸ್ಥೆ ಸರಿಪಡಿಸುವುದಿರಲಿ ಅದನ್ನು ಮಕ್ಕಳಿಗೂ ಕೊಟ್ಟು ಮುಂದೆ ನಡೆಸುವ ಜವಾಬ್ದಾರಿಯನ್ನು ಪೋಷಕರೆ ತೆಗೆದುಕೊಳ್ಳಲು ಸೋತಿರುವಾಗ ಎಷ್ಟೇ ಹೊರಗಿನ ಹೋರಾಟ,ಹಾರಾಟ ಮಾರಾಟ ಮಾಡಿದರೂ ಪ್ರಯೋಜನವಿಲ್ಲ.
ಸಾಲದ ಜೀವನದಲ್ಲಿ ಎಷ್ಟೇ ಶ್ರೀಮಂತನಾದರೂ ತೀರಿಸದೆ
ಮುಕ್ತಿಯಿಲ್ಲ. ಹೆಚ್ಚು ಮಕ್ಕಳ ಜವಾಬ್ದಾರಿ ಹೊತ್ತು ಜೀವನದಲ್ಲಿ ಸಂತೋಷ ಕಂಡಿದ್ದ ಹಿಂದಿನ ಜ್ಞಾನಿಗಳಿಗೂ ಒಂದು ಮಗುವನ್ನೇ ಸರಿಯಾಗಿ ನೋಡಿಕೊಳ್ಳಲು ಸೋತಿರುವ ಇಂದಿನ ಪೋಷಕರಿಗೂ ವ್ಯತ್ಯಾಸವೆಂದರೆ ಶಿಕ್ಷಣದಲ್ಲಿಯೇ ಬೇಜವಾಬ್ದಾರಿಯುತ ವಿಚಾರಗಳನ್ನು ತುಂಬಿ ಹೊರಜಗತ್ತನೆಡೆಗೆ ಮನಸ್ಸನ್ನು ಎಳೆದು ಆಳಿದ ರಾಜಕೀಯತೆ. ಒಟ್ಟಿನಲ್ಲಿ ಪ್ರಜಾಪ್ರಭುತ್ವದ ಪ್ರಜೆಗಳಿಗೆ ತಮ್ಮದೇ ಆದ ಜವಾಬ್ದಾರಿ ಇದೆ.ಇದು ದೇಶರಕ್ಷಣೆ.ದೇಶದ ಒಳಗಿರುವ ಸದ್ವಿಚಾರ ತಿಳಿಯುವುದರ ಮೂಲಕ ಜ್ಞಾನ ಹೆಚ್ಚಿಸಿಕೊಂಡು ತಮ್ಮ ಆತ್ಮಬಲದಿಂದ ಭ್ರಷ್ಟಾಚಾರ ವನ್ನು ಬಿಟ್ಟು ನಡೆದರೆ ಜವಾಬ್ದಾರಿ ಕಳೆದಂತೆ. ಮೇಲಿರುವ ಆ ಪರಮಾತ್ಮನ ಅಡಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಾನವ ಮಾಡಬಹುದು. ಉತ್ತಮ ಕಾರ್ಯಕ್ಕೆ ಉತ್ತಮ. ಫಲ ನಿಧಾನವಾದರೂ ಸಿಗುತ್ತದೆ. ನಮಗಲ್ಲದಿದ್ದರೂ ಮುಂದಿನ ಪೀಳಿಗೆಗಾದರೂ ಮಾಡಿದರೆ ಅದೇ ಧರ್ಮ.
ದೇಶದ ಸಾಲ ತೀರಿಸುವ ಜವಾಬ್ದಾರಿ ದೇಶದ ಪ್ರಜೆಗಳಲ್ಲಿ
ರಬೇಕಿತ್ತು.ವಿದೇಶದಿಂದ ಸಾಲ ತಂದು ದೇಶ ನಡೆಸೋ ರಾಜಕೀಯತೆಯಿಂದ ದೇಶದ ಪ್ರಜೆಗಳಲ್ಲಿ ಬೇಜವಾಬ್ದಾರಿ ಹೆಚ್ಚಾಗಿದೆ. ಆಂತರಿಕ ಸಾಲವನ್ನು ಆಂತರಿಕ ಶಕ್ತಿಯಿಂದ ತೀರಿಸಬೇಕಲ್ಲವೆ? ಇದೇ ಆತ್ಮನಿರ್ಭರ ಭಾರತ. ಅದ್ಯಾತ್ಮದ ಶಕ್ತಿಯಿಂದ ಮಾತ್ರ ಜವಾಬ್ದಾರಿಯಿಂದ ಮುಕ್ತಿ.
ಉಂಡೂ ಹೋದ ಕೊಂಡೂಹೋದ ಎಂದಂತಾಗಬಾರದು.
ಹೆಚ್ಚು ಹೆಚ್ಚು ಜವಾಬ್ದಾರಿ ಹೊತ್ತುಕೊಂಡಷ್ಟೂ ಬೇಜವಾಬ್ದಾರಿಯ ಜನರು ಹುಟ್ಟುವರು. ಮಕ್ಕಳನ್ನು ಹೊತ್ತು ಹೆತ್ತು ಸಾಕಿ ಸಲಹಿ ದೊಡ್ಡವರನ್ನಾಗಿಸುವುದು ಪೋಷಕರ ಜವಾಬ್ದಾರಿ.ನಂತರವೂ ಅವರನ್ನು ಹೊತ್ತು ನಡೆಯುತ್ತೇನೆಂದರೆ ಸಾಧ್ಯವೆ? ಜವಾಬ್ದಾರಿ ಕೊಟ್ಟು ಬಿಡಬೇಕು. ಅವರ ಸಂಸಾರವನ್ನು ನಾವೇ ನಡೆಸುವಷ್ಟು ಹಣ ಸಂಪಾದನೆ ಮಾಡುವ ಬದಲು ಜ್ಞಾನ ಕೊಟ್ಟು ಸ್ವತಂತ್ರ ಜೀವನ ನಡೆಸಲು ಬಿಟ್ಟರೆ ನಮ್ಮ ಜವಾಬ್ದಾರಿ ಕಡಿಮೆಯಾಗಿ ತಿರುಗಿ ಭಗವಂತನೆಡೆಗೆ ಸಾಗಬಹುದು. ಮಕ್ಕಳ ಮೇಲೇ ಸಾಲ ಮಾಡಿದರೆ ಅದನ್ನು ತೀರಿಸದೆ ತಿರುಗಿ ಹೋಗಲಾಗದು. ಎಲ್ಲದ್ದಕ್ಕೂ ಇತಿಮಿತಿ ಇರಬೇಕಷ್ಟೆ.
No comments:
Post a Comment