ಅನುಭವಿಗಳು ಬದುಕು ಭಾರವಾಗುವಷ್ಟು ಜವಾಬ್ದಾರಿ ಹೊತ್ತು ನಡೆಯಬಾರದೆನ್ನುವರು. ಆದರೆ ಸಂಸಾರ ಬೆಳೆದಂತೆಲ್ಲಾ ಜವಾಬ್ದಾರಿ ಹೆಚ್ಚುವುದು .ಜವಾಬ್ದಾರಿ ಹೆಚ್ಚಾದಂತೆ ಬೇರೆಯವರ ಸಹಾಯ ಸಹಕಾರ ಕೇಳಿ ಪಡೆಯುವುದೂ ಹೆಚ್ಚುವುದು.ಬೇರೆಯವರಿಂದ ಪಡೆದಂತೆಲ್ಲಾ ಸಾಲ ಬೆಳೆಯುವುದು.ಸಾಲ ತೀರಿಸದಿದ್ದರೆ ಬದುಕು ಭಾರವಾಗುವುದು.ಹಾಗಾದರೆ ಇದಕ್ಕೆ ಪರಿಹಾರ ಬದುಕಿನಲ್ಲಿ ಸರಳತೆ, ನಿಸ್ವಾರ್ಥ, ನಿರಹಂಕಾರದ ಸೇವಾಗುಣವಿದ್ದರೆ ಇಲ್ಲಿ ನನ್ನದೆನ್ನುವ ಅಹಂಬಾವವಿರದೆ ಕರ್ತವ್ಯವನ್ನು ಸ್ವಚ್ಚವಾಗಿ ಮಾಡಿದಂತೆಲ್ಲಾ ಆ ಮೇಲಿನ ಪರಮಾತ್ಮನೇ ಆ ಭಾರವನ್ನು ಹೊತ್ತು ನಡೆಸುತ್ತಾನೆ. ಯಾವಾಗ ಎಲ್ಲದರಲ್ಲೂ ನಾನೇ ಇರಬೇಕು, ನನ್ನದೇ ನಡೆಯಬೇಕು,ನನಗೇ ಸಿಗಬೇಕೆಂದು ನಡೆಯುವೆವೋ ಆಗ ಎಲ್ಲಾ ಸಿಕ್ಕಿದರೂ ಭಾರ ಹೋರಲಾಗದೆ ಕುಸಿದು ಬೀಳಬೇಕಾಗುವುದು. ಅದಕ್ಕಾಗಿ ಗುರುಹಿರಿಯರು ತಿಳಿಸುವುದುಹಂಚಿಕೊಂಡು ಬದುಕು ಎಂದು.ಆದರೆ ಈಗ ಭ್ರಷ್ಟಾಚಾರ ಹಂಚಿಕೊಂಡು ಎಲ್ಲರ ಬದುಕು ಭಾರವಾಗುತ್ತಿದೆ. ಇದಕ್ಕೆ ಬದಲಿಗೆ ಶಿಷ್ಟಾಚಾರ ಹಂಚಿದರೆ ಬದುಕಿಗೆ ಅರ್ಥ ವಿರುತ್ತದೆ. ಸಾಲ ಹಂಚಿದಷ್ಟೂ ಸಾಲ ಬೆಳೆಯುತ್ತದೆ. ದಾನ ಮಾಡಿದರೆ ಸಾಲ ತೀರುತ್ತದೆ. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ. ಕೊಡದೆ ತಿಂದದ್ದು ಭಾರವಾಗುತ್ತದೆ.ಮಕ್ಕಳಿಗೆ ಉತ್ತಮ ಸಂಸ್ಕಾರದ ಶಿಕ್ಷಣ ಕೊಟ್ಟರೆ ಬೆಳೆದಂತೆಲ್ಲಾ ಮನಸ್ಸು ಹಗುರವಾಗುತ್ತದೆ. ಅದೇ ಮಕ್ಕಳಿಗೆ ಬೇಕಾದ್ದನ್ನೆಲ್ಲಾ ತರಿಸಿ ತಿನ್ನಿಸಿ ಸುಖ ತೋರಿಸಿದರೆ ಬೆಳೆದಂತೆಲ್ಲಾ ಮಕ್ಕಳೇ ಭಾರವಾಗುತ್ತಾರೆ. ಭಾರವಾದವರನ್ನು ಎತ್ತಿ ಹೊತ್ತು ನಡೆಯೋದಕ್ಕೆ ಪೋಷಕರಿಗೆ ಶಕ್ತಿಯಿರೋದಿಲ್ಲ. ಇದು ಸರ್ವ ಕಾಲಿಕ ಸತ್ಯ.ಇದಕ್ಕೆ ಯಾವ ಪುರಾಣ ಇತಿಹಾಸ ಓದುವ ಅಗತ್ಯವಿಲ್ಲ.
ಈಗಿನ ದೇಶದ ಪರಿಸ್ಥಿತಿ ನೋಡಿದರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ದೇಶದ ಸಾಲ ತೀರಿಸಬೇಕಿತ್ತು .ಪ್ರಜೆಗಳ ಸಾಲ ದೇಶ ತೀರಿಸಲಾಗದೆ ವಿದೇಶಿ ಸಾಲ ಬೆಳೆದಿದೆ.
ಮನೆಮನೆಯ ಜವಾಬ್ದಾರಿ ಪೋಷಕರು ವಹಿಸಿಕೊಂಡು ಸಮಾಜದಲ್ಲಿ ಸಾಮರಸ್ಯ ಬೆಳೆಯಬೇಕಿತ್ತು. ಸರ್ಕಾರ ಇದರ ಮಧ್ಯೆ ತೂರಿಕೊಂಡು ಮನೆಮನೆಯಲ್ಲಿ ಸಮಾನತೆ ಕುಸಿದಿದೆ.
ಮಾನವರನ್ನು ದೇವರು ಸಂರಕ್ಷಣೆ ಮಾಡಬೇಕಿತ್ತು ಆದರೆ ಈಗ ದೇವರನ್ನು ರಕ್ಷಣೆ ಮಾಡುವಷ್ಟು ರಾಜಕೀಯ ಬುದ್ದಿ ಮಾನವನಿಗಿದೆ ಆದರೆ ದೈವತ್ವವಿಲ್ಲವಾಗುತ್ತಿದೆ.
ಹಿಂದೂ ಸನಾತನ ಕಾಲದಿಂದಲೂ ಬಂದಿದ್ದರೂ ಹಿಂದಿರುಗಿ ಹೋಗಲಾಗದವರು ಹಿಂದೂ ಧರ್ಮ ವೇ ಇಲ್ಲ ಎನ್ನುವರು. ಇದಕ್ಕೆ ದ್ವನಿಗೂಡಿಸುವವರೂ ಹಿಂದೂಗಳೆ ಎನ್ನುವುದು ಭಾರತಕ್ಕೆ ಭಾರವಾಗುತ್ತಿದೆ.
ಸ್ತ್ರೀ ಶಕ್ತಿಯನ್ನು ಹಿಂದುಳಿಸಿ ಮುಂದೆ ನಡೆದವರಿಗೆ ಭೂಮಿಯ ಸಾಲ ತೀರಿಸಲಾಗದೆ ಋಣಭಾರ ಹೆಚ್ಚಾಗುತ್ತಿದೆ. ಅದಕ್ಕೆ ಹಿಂದೆ ಬಡವರ ಮನೆಯ ಹೆಣ್ಣು ತರಬೇಕು ಶ್ರೀಮಂತ ಮನೆಯ ಗಂಡಿರಬೇಕು ಎನ್ನುತ್ತಿದ್ದರು ಕಾರಣ ಭೂಮಿಯ ಋಣ ತೀರಿಸಲು ಹೆಣ್ಣಿಗೆ ಜ್ಞಾನವಿರಬೇಕು.ಜ್ಞಾನದಿಂದ ಮಾತ್ರ ಸಾಲ ತೀರಿಸಲಾಗುವುದು. ಕಷ್ಟಪಟ್ಟು ದುಡಿದು ತಂದ ಹಣವನ್ನು ಸದ್ವಿನಿಯೋಗ ಮಾಡಿದರೆ ಮನಸ್ಸು ಹಗುರವಾಗುವುದು. ಅಂದರೆ ಪರಮಾತ್ಮನಿಗೆ ತೃಪ್ತಿ ಯಾಗುವ ಸೇವೆಯಿಂದ ಮಾತ್ರ ಜೀವಕ್ಕೆ ಶಾಂತಿ, ತೃಪ್ತಿ ಮುಕ್ತಿ ಎಂದರ್ಥ. ಈಗ ಹಣಕ್ಕೆ ಕೊರತೆಯಿಲ್ಲ ಜ್ಞಾನದ ಕೊರತೆಯಿದೆ.ಹೀಗಾಗಿ ಮನಸ್ಸು ಭಾರ,ಬದುಕೂ ಭಾರ. ಆಸೆ ಹೆಚ್ಚಾದಂತೆ ದು:ಖವೂ ಹೆಚ್ಚುವುದು. ಧಾರ್ಮಿಕ ವಿಚಾರವನ್ನು ಅರ್ಥ ಮಾಡಿಕೊಳ್ಳಲು ಸತ್ಯ ಜ್ಞಾನವಿರಬೇಕು. ಹಣವನ್ನು ದಾನ ಮಾಡಿದರೂ ಹಣ ಸಂಪಾದನೆ ಸುಜ್ಞಾನದಿಂದ ಆದರೆ ಸಂತೋಷ. ಅಜ್ಞಾನದ ಲಕ್ಷ ರೂಗಳಿಗಿಂತ ಸುಜ್ಞಾನದ ನೂರು ರುಪಾಯಿ ಆತ್ಮಸುಖ ಕೊಡುತ್ತದೆ.
ಬಿಕ್ಷುಗಳು ಬದುಕುವುದಕ್ಕಾಗಿ ತಿನ್ನುವರು ಬಿಕ್ಷುಕರು ತಿನ್ನುವುದಕ್ಕಾಗಿ ಬದುಕುವರು. ಇಬ್ಬರೂ ಒಂದೇ ಭೂಮಿಯ ಮಾನವರು. ಸತ್ಕರ್ಮ ದಿಂದ ಜೀವನ್ ಮುಕ್ತಿ.
No comments:
Post a Comment