ವರಸಿದ್ದಿವಿನಾಯಕನ ವ್ರತ ಪೂಜೆ ಮಾಡಿ ನಾವು ನಮಗೆ ಬೇಕಾದಂತಹ ವರವನ್ನು ಬೇಡೋದು ದೇವರು ಕೊಡೋದು ಎಲ್ಲಾ ನಡೆಯುತ್ತಿದೆ. ವಿಘ್ನಗಳನ್ನು ತೊಲಗಿಸಿ ಕಾಪಾಡುವ ವಿಘ್ನೇಶ್ವರ, ಕಷ್ಟಗಳನ್ನು ದೂರಮಾಡುವ ಸಂಕಷ್ಟಹರ ಗಣಪತಿ ಎಲ್ಲಾ ದೇವಾನುದೇವತೆಗಳಿಗೂ ಗಣಗಳಿಗೂ ಅಧಿಪತಿಯಾಗಿರುವ ಗಣಪತಿಯನ್ನು ಯಾವ ಹೆಸರಿನಿಂದ ಪೂಜಿಸಿದರೂ ಮಹಾಗಣಪತಿಗೇ ಸೇರೋದು ಎಂದಂತೆ ಮಹಾವಿಷ್ಣುವಿನ ಅಸಂಖ್ಯಾತ ನಾಮಗಳಿವೆ ಹಾಗೇ ಎಲ್ಲಾ ದೇವತೆಗಳಿಗೂ ಒಂದೊಂದು ವಿಶೇಷ ಶಕ್ತಿ ಪಡೆದು ಅವರ ಭಕ್ತರು ಬೇಡಿದ್ದನ್ನು ಕೊಡುವ ಕಾರ್ಯದಲ್ಲಿದ್ದಾರೆನ್ನುವುದು ನಮ್ಮ ಹಿಂದೂಗಳ ನಂಬಿಕೆಯಂತೆ ದೇವತಾ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇಷ್ಟೆಲ್ಲಾ ಮಾಡಿದರೂ ಯಾಕೆ ಅಸುರಿ ಶಕ್ತಿ ಬೆಳೆಯುತ್ತಿದೆ? ನಿಜವಾಗಿ ಅಸುರ ಶಕ್ತಿ ಇರೋದೆಲ್ಲಿ? ಎಂದಾಗ ನಾವು ಬೇಡಿದ್ದು ಕೊಟ್ಟರೆ ದೇವರಾಗುವರು ಕೊಡದಿದ್ದರೆ ಆ ದೇವರೇ ಇಲ್ಲವೆನ್ನುವರು ಅಸುರರು.ಅಂದರೆ ನಮ್ಮ ಸುಖ ಸ್ವಾರ್ಥ ಕ್ಕೆ ದೇವರನ್ನು ಆಶ್ರಯಿಸಿ, ಬೇಡಿದರೆ ಆಸೆ ಹೆಚ್ಚಾಗುತ್ತಾ ಕೊನೆಗೆ ಅದೇ ಅತಿಆಸೆಯಾಗಿ ಅಹಂಕಾರ ಸ್ವಾರ್ಥ ದೆಡೆಗೆ ಹೋಗಿ ದೇವರಿಲ್ಲ ನಾನೇ ಎಲ್ಲಾ ಎನ್ನುವ ಅಸುರಿ ಗುಣ ನಮ್ಮೊಳಗೇ ಬೆಳೆಯುತ್ತದೆ. ಹೀಗಾಗಿ ಎಷ್ಟೇ ದೇವರ ಪೂಜೆ ಮಾಡಿದರೂ ಅದರಿಂದ ನಮ್ಮ ಆತ್ಮವಿಶ್ವಾಸ, ನಿಸ್ವಾರ್ಥ ಭಕ್ತಿ, ಶಕ್ತಿ, ಶಾಂತಿ ಬೆಳೆಯುತ್ತಾ ದೈವತ್ವ ದೆಡೆಗೆ ಹೋದವರಿಗೆ ದೇವರ ಅಸ್ತಿತ್ವ ಅರಿವಾಗಿದೆ. ಯೋಗದಿಂದ ಮಾತ್ರ ಪರಮಾತ್ಮನ ಅರಿಯಲು ಸಾಧ್ಯವೆಂದರು. ಹೊರಗಿನಿಂದ ಬೆಳೆಸಲಾಗಿರುವ ಎಲ್ಲಾ ದೇವರು ಮಾನವನ ಕೈಗೊಂಬೆಯಾಗಬಾರದೆನ್ನುವ ಕಾರಣಕ್ಕಾಗಿ ಸಾಕಾರದಿಂದ ನಿರಾಕಾರದೆಡೆಗೆ ಮನಸ್ಸು ಹೊರಡಲು ಈ ಯೋಗ ಮಾರ್ಗ ಹಿಡಿದರು. ದ್ಯಾನ, ಜಪ,ತಪ, ಯೋಗ,ಪ್ರಾಣಾಯಾಮ,ಭಕ್ತಿ,ಸೇವೆ,ದಾನ,ಧರ್ಮ ದಲ್ಲಿ ಪರಮಸತ್ಯವಿದ್ದರೆ ಅಲ್ಲಿಯೇ ಪರಮಾತ್ಮನ ಸತ್ಯದ ಅರಿವಿರುವುದು. ಎಲ್ಲಾ ಮಾಡೋದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುವ ಹಂತದಿಂದ ಮುಂದೆ ನಡೆದವರಿಗೆ ಎಲ್ಲಾ ಇದ್ದರೂ ದೈವತ್ವದ ಕೊರತೆಯಿಂದ ಅಶಾಂತಿ ಹೆಚ್ಚಾಗಿರುತ್ತದೆ. ಅಂದರೆ ಹಣದಿಂದ ಯಾವ ದೇವರನ್ನೂ ಕಂಡವರಿಲ್ಲ ಯೋಗದಿಂದ ಕಂಡವರಿದ್ದಾರೆ. ಜ್ಞಾನಯೋಗ,ರಾಜಯೋಗ,ಭಕ್ತಿಯೋಗ,ಕರ್ಮಯೋಗದ ಬಗ್ಗೆ ಮಾನವ ಅನುಭವಿಸಿಯೇ ತಿಳಿಯಲು ತತ್ವದಿಂದ ಸಾಧ್ಯ.ಎಲ್ಲರಲ್ಲಿಯೂ ಅಡಗಿರುವ ಪರಮಾತ್ಮ ಒಬ್ಬನೆನ್ನುವವರೇ ದ್ವೇಷದ ವಿಷಬೀಜಬಿತ್ತಿ ಬೆಳೆಸಿ ಆಳಿದರೆ ತಂತ್ರವಾಗುತ್ತದೆ. ಕಷ್ಟಪಡದೆ ಸುಖ ಪಡಲು ವಾಮಮಾರ್ಗ ಹಿಡಿದರೂ ಸೀದಾ ಹೋಗುವವರೆಗೂ ನಿಜವಾದ ಯೋಗ ಸಿಗದು.
ಭೌತಿಕದ ಯೋಗಕ್ಕೂ ಅಧ್ಯಾತ್ಮದ ಯೋಗಕ್ಕೂ ನಡುವಿರುವ ಭೋಗದಲ್ಲಿ ದೇವರು ಕೊಟ್ಟಿದ್ದು ಎಷ್ಟು ನಾವು ಪಡೆದಷ್ಟು ಎಷ್ಟು ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಷ್ಟೂ ಬೇಡೋರು ಹೆಚ್ಚು . ಬೇಡಿದಷ್ಟೂ ಸಾಲ .ಈ ಸಾಲ ತೀರಿಸಲು ತಿರುಗಿ ಕೊಡೋದೇ ಲೆಕ್ಕಾಚಾರದ ವ್ಯವಹಾರವಾಗಿದೆ. ದೇವರನ್ನು ಯಾವ ರೀತಿಯಲ್ಲಿ ಆರಾಧನೆ ಮಾಡಿದರೂ ಸರಿ ಹೇಗೆ ಮಾಡಿದರೂ ಕೇಳೋರಿಲ್ಲ.ಎಲ್ಲರಲ್ಲಿಯೂ ಅವನೇ ಇರೋವಾಗ ದುಷ್ಟರು ಶಿಷ್ಟರು ಅವರವರ ಮನಸ್ಥಿತಿ,ಪರಿಸ್ಥಿತಿಗೆ ತಕ್ಕಂತೆ ದೇವತಾರಾಧನೆ ಮಾಡಿ ಅದಕ್ಕೆ ತಕ್ಕಂತೆ ಫಲವನ್ನು ಅನುಭವಿಸುತ್ತಾರೆ. ಯಾವ ದೇವರನ್ನು ಬೇಡದೆ,ಕಾಡದೆ ತನ್ನ ಕಾಯಕದಲ್ಲಿ ಶ್ರದ್ಧೆ ಭಕ್ತಿ ನಿಷ್ಟೆ ಸಹನೆ ಪ್ರೀತಿ ವಿಶ್ವಾಸ ಹೊಂದಿರುವವರಿಗೆ ಪ್ರತಿಯೊಂದು ಯೋಗಾವೇ ಆಗಿರುವುದು.ಹೆಚ್ಚು ಹಣ ಸಂಪಾದನೆಯಾದರೆ ಆ ಪರಮಾತ್ಮನಿಗೆ ಋಣಿಯಾಗಿರುವರು, ಕಡಿಮೆಯಾಗಿದ್ದರೆ ಮತ್ತಷ್ಟು ಕಷ್ಟಪಟ್ಟು ದುಡಿಯುವರು. ಯಾರಲ್ಲಿ ಹೆಚ್ಚು ಹಣ,ಅಧಿಕಾರ,ಆಸ್ತಿ ಯಿರುವುದೋ ಅವರು ದೊಡ್ಡ ಗುಡಿಗೋಪುರ ಕಟ್ಟಿದರೆ ಸಾಲಮನ್ನಾ, ಏನೂ ಇಲ್ಲದವನಿಗೆ ಸಾಲವೇ ಇಲ್ಲ ಕಾರಣ ಅವರು ದೇವರ ಸೇವಕರಾಗೇ ಇರುವರು. ಸೇವೆಯಲ್ಲಿ ದೊಡ್ಡದು ಸಣ್ಣದು ಎಂದು ಕಣ್ಣಿಗೆ ಕಾಣೋದೇ ಬೇರೆ. ಕಾಣದ ಸೇವೆಯೇ ನಿಜವಾದ ಯೋಗ.
ಗಣಪತಿಯ ವಿಶೇಷವೇ ಗಜಾನನ. ಗಜನ ಶಿರವನ್ನು ಹೊಂದಿರುವ ಗಣೇಶ ಗಣಗಳಿಗೆ ಒಡೆಯ. ಗಣೇಶನ ಕಣ್ಣು ಸಣ್ಣ,ದೊಡ್ಡ ಕಿವಿ, ಬಾಯಿಗೆ ಅಡ್ಡಲಾಗಿರುವ ಉದ್ದ ಸೊಂಡಿಲು ಇವುಗಳು ಬುದ್ದಿವಂತಿಕೆ ಯ ಲಕ್ಷಣವಾಗಿದೆ.
ಸಣ್ಣ ಕಣ್ಣಿದ್ದವರಿಗೆ ಬುದ್ದಿವಂತರೆನ್ನುವರು ಇಲ್ಲಿ ನಮ್ಮ ಬುದ್ದಿ ನಮ್ಮೊಳಗಿನ ಸೂಕ್ಮ ಜ್ಞಾನದಿಂದ ಬೆಳೆದರೆ ಸಣ್ಣ ವಿಷಯದ ಹಿಂದೆ ಇರುವ ಸೂಕ್ಷ್ಮ ಸತ್ಯದ ಅರಿವಾಗುವುದು. ದೊಡ್ಡ ಕಿವಿ ಎಂದರೆ ಹೆಚ್ಚು ಕೇಳುವಿಕೆಯ ಲಕ್ಷಣ. ಉತ್ತಮವಾದದ್ದನ್ನು ಯಾರೆಷ್ಟು ಕೇಳುವರೋ ಅವರ ಜ್ಞಾನ ಹೆಚ್ಚುವುದು.ಇನ್ನು ಮಾತನಾಡುವಾಗ ಎಚ್ಚರವಾಗಿರಬೇಕೆನ್ನುವ ಸಂದೇಶವಿದೆ.ಬಾಯಿ ಮೇಲೆ ಕೈಯಿಟ್ಟು ಕೂರಿಸುವ ಶಿಕ್ಷಕರ ಉದ್ದೇಶ ನಾವು ಹೇಳುವುದನ್ನು ಮಾತನಾಡದೆ ಕೇಳಬೇಕು ಎಂದಾಗಿತ್ತು.ಇವೆಲ್ಲವೂ ಒಳ್ಳೆಯ ವಿಚಾರಕ್ಕೆ ಬಳಸಿದರೆ ಮಾನವನ ಸಾಕಷ್ಟು ವಿಘ್ನಗಳಿಗೆ ಪರಿಹಾರ ಒಳಗೇ ಇರುವ ಆ ವಿಘ್ನೇಶ್ವರನಿಂದ ಸಿಗುತ್ತದೆ. ವರ್ಷಕ್ಕೊಮ್ಮೆ ಹರ್ಷದಿಂದ ಬರುವ ವಿನಾಯಕನನ್ನು ವರ್ಷವಿಡೀ ಸುಖವಾಗಿರುವಂತೆ ಬೇಡೋದು ಸುಲಭವಾದರೂ ಸುಖ ಯಾವುದು ದು:ಖ ಯಾವುದು ಎನ್ನುವ ಜ್ಞಾನಶಕ್ತಿಯನ್ನು ಕೊಡುವಂತೆ ಬೇಡಿದರೆ ಆಗಿದ್ದೆಲ್ಲಾ,ಆಗೋದೆಲ್ಲಾ ಒಳ್ಳೆಯದಕ್ಕೆ ಎನ್ನುವ ಸತ್ಯ ತಿಳಿಯಬಹುದು. ಒಟ್ಟಿನಲ್ಲಿ ಎಲ್ಲಾ ಕಡೆ ಕೂರಿಸಿ ದೇವರನ್ನು ಮಾಧ್ಯಮವಾಗಿಸಿಕೊಂಡು ಮನರಂಜನೆಗೆ ಬಳಸೋ ಬದಲಾಗಿ ಎಲ್ಲಾ ಒಂದೆಡೆ ಸೇರಿಸಿಕೊಂಡು ದೈವಶಕ್ತಿಯನ್ನು ಜಾಗೃತಗೊಳಿಸಿಕೊಳ್ಳುವ ಕಾರ್ಯಕ್ರಮಕ್ಕೆ ಹೆಚ್ಚಿನಮಹತ್ವವಿದೆ. ಹಿಂದೆ ಇದೇ ಕಾರಣಕ್ಕಾಗಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ಕೆ ಹೆಚ್ಚಿನ ಜನಬಲ ವಿತ್ತು.ಈಗ ಅಲ್ಲಿ ನಡೆಯೋ ಮನರಂಜನೆಗೆ ಜನರು ಹೆಚ್ಚಾಗಿ ದೇವರು ಇರುವನೋ ಇಲ್ಲವೋ ಒಟ್ಟಿನಲ್ಲಿ ಆಚರಣೆ ನಡೆದಿದೆ. ಕೆಲವೆಡೆ ಧಾರ್ಮಿಕ. ಕಾರ್ಯಕ್ರಮ ನಡೆಸುತ್ತಿರುವರು ಹೀಗಾಗಿ ಧರ್ಮ ಸುರಕ್ಷಿತವಾಗಿರುತ್ತದೆ. ನಾವು ನಮ್ಮ ಧರ್ಮ ಕ್ಕೆ ತಕ್ಕಂತೆ ನಡೆದರೆ ಧರ್ಮ ನಮ್ಮ ರಕ್ಷಣೆ ಮಾಡುವುದು.ಇಲ್ಲಿ ರಕ್ಷಣೆ ಎಂದರೆ ಆತ್ಮರಕ್ಷಣೆಯಾಗಿದೆ. ಜೀವ ಒಮ್ಮೆ ಹೋಗೋದೆ ಎಂದು ಎಲ್ಲಾ ತಿಳಿದಿದ್ದರೂ ದೇವರಲ್ಲಿ ಜೀವಬಿಕ್ಷೆ ಬೇಡುವವರಿದ್ದಾರೆ ಅದರಂತೆ ತಾತ್ಕಾಲಿಕ ವರವೂ ಸಿಗುತ್ತದೆ. ಆದರೆ ಶಾಶ್ವತವಾಗಿ ಯಾವ ದೇವರೂ ಜೀವ ರಕ್ಷಣೆ ಮಾಡಲಾಗದು.ಹೀಗಾಗಿ ಆತ್ಮವಿಶ್ವಾಸ, ಆತ್ಮಬಲ,ಆತ್ಮಸ್ಥೈರ್ಯ, ಆತ್ಮರಕ್ಷಣೆಗಾಗಿ ದೇವರ ಸೇವೆ ಅಗತ್ಯ ವಾಗಿದೆ.ಕಾರಣ ದೇವರಿಗೆ ಸಾವಿಲ್ಲ.ಆತ್ಮವೇ ದೇವರು. ಆತ್ಮ ಅಮರವಾದ ಹಾಗೆ ಸತ್ಯ ಅಮರ.ಆತ್ಮಸಾಕ್ಷಿಯಂತೆ ನಡೆಯುವುದೇ ದೇವರ ಸೇವೆ ಎನ್ನುವರು ಮಹಾತ್ಮರು. ಕಾಣದ ದೇವರ ಸೇವೆ ಮಾಡಲಾಗದ ಕಾರಣವೇ ಮೂರ್ತಿ ಪೂಜೆ. ಮೂರ್ತಿ ಏನೇ ಇರಲಿ ಶುದ್ದವಾಗಿರಲಿ.
ಅದರಮೇಲೆ ಹಾಕುವ ಅಲಂಕಾರದಿಂದ ದೇವರು ಒಲಿಯುವನೆ? ಇದನ್ನು ಶಿವಶರಣರು,ದಾಸ,ಸಂತರು ತಿರಸ್ಕರಿಸಿದ್ದರು .ಆದರೂ ಜನರು ಕಾಣುವ ಕಣ್ಣಿಗೆ ಬೆಲೆ ಕೊಟ್ಟರೂ ಕಾಣದ ಕಣ್ಣಿನಿಂದ ಮೋಸಹೋಗೋದು ತಪ್ಪದು.
ಜಯದೇವ ಜಯದೇವ ಶ್ರೀ ಗಣಪತಿ ರಾಯ ಜಯಗಣಪತಿ ರಾಯ ಭಯಕಾರಕ ಭಯಹಾರಕ ಓಂಕಾರ ಕಾಯ....ದ.ರಾ.ಬೇಂದ್ರೆಯವರ ಇದರಲ್ಲಿ ಭಯಕಾರಕನೂ ಭಯಹಾರಕನೂ ಅವನೇ ಎಂದಾಗ ಭಯಕಾರಕ ಅಸುರನೆ?ಭಯಹಾರಕ ದೇವರೆ? ಒಳ್ಳೆಯದನ್ನು ಮಾಡುವವರಿಗೆ ಭಯಹಾರಕನಾಗಿ,ಕೆಟ್ಟದ್ದನ್ನು ಮಾಡುವವರಿಗೆ ಭಯಕಾರಕನಾಗಿ ನಿಂತಿರುವ ದೇವನೊಬ್ಬನೆ ನಾಮ ಹಲವು. ಒಂದೊಂದು ಕಾರ್ಯಕ್ಕೆ ಒಂದೊಂದು ಹೆಸರಿನ ದೇವರುಗಳು. ಹಾಗಾದರೆ ದೇವರಿರೋದೆಲ್ಲಿ? ಒಳಗೂ ಹೊರಗೂ ಆವರಿಸಿರುವ ಈ ಅಗೋಚರ ಶಕ್ತಿ ಮಾನವನಿಗೆ ಕಾಣದಿದ್ದರೂ ಎಲ್ಲರನ್ನೂ ನಡೆಸುತ್ತಿರುವುದು ಸತ್ಯವಲ್ಲವೆ?
ಯಾರೋ ಇಲ್ಲವೆಂದರೆ ಅವರಿಗೆ ಕಂಡಿಲ್ಲವೆಂದು ಸುಮ್ಮನಿರಬೇಕೇ ಹೊರತು ಅವರ ಜೊತೆಗೆ ಇಲ್ಲವೆಂದು ಇದೆಯೆಂದು ವಾದ ಮಾಡೋದರಿಂದ ಇದ್ದ ದೈವತ್ವವೂ ಹಿಂದುಳಿಯುವುದಷ್ಟೆ. ಅದಕ್ಕೆ ಹಿಂದಿನ ಗುರುಹಿರಿಯರು ಕಂಡಿರುವ ಸತ್ಯವನ್ನು ತಿಳಿದು ಕೇಳುತ್ತಾ ಒಳಗಿನಿಂದ ಶುದ್ದವಾದರೆ ಎಲ್ಲಾ ದೇವಾಸುರರ ಪರಿಚಯವಾಗುವುದು. ಕಾರಣ ಇವು ಮಾನವನ ಗುಣಗಳಿಂದ ತಿಳಿಯಬಹುದು. ಇದಕ್ಕೆ ನಮಗೆ ಸೂಕ್ಷ್ಮ ದೃಷ್ಟಿ ಯಿರಬೇಕಿದೆ.
ಜಗತ್ತನ್ನು ರಕ್ಷಿಸುವ ಜಗನ್ಮಾತೆ, ಜಗನ್ನಾಥ, ಜಗದೀಶ್ವರನ ಸಣ್ಣ ಬಿಂದು ಮಾತ್ರದವರಾದ ಮಾನವನೇ ಜಗತ್ತನ್ನೇ ಆಳುತ್ತೇನೆಂದರೆ ಇದರಲ್ಲಿ ಸತ್ಯವೆಷ್ಟಿದೆ? ಮಿಥ್ಯವೆಷ್ಟಿದೆ? ಈ ಸತ್ಯ ತಿಳಿದವರಿಗೆ ಅಧ್ವೈತ ದ ನಾನೆಂಬುದಿಲ್ಲ ಅರ್ಥ ವಾಗಿ ನಾವೆಲ್ಲರೂ ಯಾಕೆ ದೇವತೆಗಳನ್ನು ಆರಾಧಿಸಿ ಪ್ರಾರ್ಥನೆ ಮಾಡುತ್ತಿದ್ದೇವೆಂಬ ಅರಿವು ಹೆಚ್ಚಾಗುವುದು. ದೇವರ ಹೆಸರಿನಲ್ಲಿ ರಾಜಕೀಯ ನಡೆಸಿದರೂ ಒಳಗಿರುವ ರಾಜಯೋಗದ ಶಕ್ತಿ ಹಿಂದುಳಿಯುವುದು. ಹೀಗಾಗಿ ಇಂದು ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ದೇವರಾಗಿ ಕಾಣುವ ಅಜ್ಞಾನ ಹೆಚ್ಚಾಗಿದೆ. ಹೆಸರು,ಹಣ,ಅಧಿಕಾರ ಹೆಚ್ಚಾದಷ್ಟೂ ಜನಬಲವೂ ಹೆಚ್ಚಬಹುದು ಆದರೆ ಅದರ ಹಿಂದಿನ ಸಾಲ ತೀರಿಸಲೇಬೇಕೆಂಬ ಜ್ಞಾನ ಹೆಚ್ಚಾಗುವುದಿಲ್ಲ. ನಾಟಕ ಆಡಿಸೋನು ಕಾಣೋದಿಲ್ಲ ಆಡೋರು ಕಾಣುವರು.
ಉತ್ತಮ ನಾಟಕದ ಪಾತ್ರಕ್ಕೆ ಉತ್ತಮ ಫಲ ಜೀವಾತ್ಮನೇ ಅನುಭವಿಸುವುದು ಸಹಜ. ನಮ್ಮ ನಾಟಕದ ಜೀವನದಿಂದ ಇನ್ನೊಬ್ಬರ ಜೀವನ ಹಾಳಾಗದಂತೆ ಎಚ್ಚರವಹಿಸಿದರೆ ಸರಿ.ಆದರೂ ನಮ್ಮ ದೃಷ್ಟಿಯಲ್ಲಿ ಸರಿಯಾಗಿದ್ದರೂ ಇನ್ನೊಬ್ಬರಿಗೆ ತಪ್ಪು ಕಾಣೋದಕ್ಕೆ ಅವರ ದೃಷ್ಟಿಕೋನ ಕಾರಣ.
ರಾಮ ರಾವಣರಲ್ಲಿ ವ್ಯತ್ಯಾಸ ಹುಡುಕಿದರೆ ಬಹಳವಿದೆ.
ದೇವಾಸುರರಲ್ಲಿ ಗುಣ ಒಂದೇ ಇದ್ದರೂ ಅದನ್ನು ಬಳಸೋ ರೀತಿ ಬೇರೆಯಾಗಿರುವುದು.
ಹೆಚ್ಚಿನ ಸಂಪಾದನೆಯಿದ್ದವರು ದೊಡ್ಡ ದೊಡ್ಡ ವಸ್ತು ಒಡವೆ ಮನೆ ಮಠಕ್ಕೆ ಸುರಿಯುವರು.ಕಡಿಮೆಯಿದ್ದವರು ಅವಶ್ಯಕತೆ ಗಿಂತ ಹೆಚ್ಚು ಬಳಸುವುದಿಲ್ಲವೆಂದರೆ ತಪ್ಪು ಎಂದರೆ ಸರಿಯಲ್ಲ. ನಿಜವಾದ ಶ್ರೀಮಂತ ಬಡವನೇ ಎಂದರೆ ತಪ್ಪಲ್ಲ. ಕಾರಣ ಅವನ ಭೌತಿಕದ ಸಾಲ ಕಡಿಮೆಯಿದೆ ಅಧ್ಯಾತ್ಮ ಜ್ಞಾನ ಹೆಚ್ಚಾಗಿರುವುದು.ಹೀಗಾಗಿ ಪಾಲಿಗೆ ಬಂದದ್ದು ಪಂಚಾಮೃತವೆಂದೆಣಿಸಿ ಸದ್ಬಳಕೆ ಮಾಡಿಕೊಂಡು ಜೀವನದ ಸುಖ ಕಾಣುವನು. ಇವನನ್ನು ಬಡವನೆಂದೆಣಿಸಿ ಹಿಂದೆ ತಳ್ಳುವುದು ಬಡತನದ ಲಕ್ಷಣ.
ಇದೇ ರೀತಿಯಲ್ಲಿ ರಾಮನ ಜೀವನದಲ್ಲಿ ಹೋರಾಟವೇ ಹೆಚ್ಚು,ರಾವಣನ ಜೀವನದಲ್ಲಿ ಹಾರಾಟ,ಮಾರಾಟ ಹೆಚ್ಚು.
ಹೋರಾಟದಲ್ಲಿ ಗೆದ್ದ ರಾಮ ದೇವನಾದ ಹಾರಾಟ ಮಾರಾಟಕ್ಕೆ ಇಳಿದ ರಾವಣ ಅಸುರನೆನಿಸಿಕೊಂಡ.ಇದಕ್ಕೆ ಕಾರಣ ಹಿಂದಿನ ಜನ್ಮದ ಕರ್ಮಫಲ.ಕಣ್ಣಿಗೆ ಕಾಣೋದಷ್ಟೆ ಸತ್ಯವೆಂದರೆ ಅದರಷ್ಟು ಸುಳ್ಳು ಬೇರೊಂದಿಲ್ಲವೆನ್ನುವರು ಮಹಾತ್ಮರು. ಸೂಕ್ಮವಾಗಿರುವ ಇವೆರಡೂ ಸತ್ಯಾಸತ್ಯತೆ ಅರ್ಥ ವಾಗೋದಕ್ಕೆ ಕಷ್ಟವಿದೆ. ಕಷ್ಟಪಡದಿದ್ದರೆ ತಿಳಿಯದು.ಇಲ್ಲ ಆ ಭಗವಂತನ ಕೃಷೆ ಇದ್ದರೆ ಇದ್ದಲ್ಲಿಯೇ ಕಾಣಬಹುದು.
ಮಂತ್ರದಿಂದ ಮಾವಿನಕಾಯಿ ಬೀಳಿಸುವ ಶಕ್ತಿ ಹಿಂದೆ ಇತ್ತು.
ಇಂದು ಮಂತ್ರದ ಉಗುಳೇ ಹೆಚ್ಚಾಗಿದೆ
ಮುಂದೆ ಮಂತ್ರವನ್ನು ಕುತಂತ್ರದಿಂದ ಬಳಸುವ ಅಸುರರೆ ಬೆಳೆದರೆ ಉಪಯೋಗವಿಲ್ಲ.ಅದಕ್ಕೆ ಜ್ಞಾನದಿಂದ ಸತ್ಯಾಸತ್ಯತೆಯನ್ನು ಗುರುತಿಸಲು ಆತ್ಮಸಾಕ್ಷಿ ಅಗತ್ಯವಿದೆ ಎಂದರು. ಇದರಲ್ಲಿ ಭೌತಿಕ ಪಾರಮಾರ್ಥಿಕ ಸತ್ಯ ಒಂದೇ ನಾಣ್ಯದ ಎರಡು ಮುಖ. ವ್ಯವಹಾರಕ್ಕೆ ಮುಖ ನೋಡಿ ಮಣೆ ಹಾಕಿದರೆ ನಷ್ಟ ಜ್ಞಾನ ನೋಡಿ ಸಹಕರಿಸಿದರೆ ಲಾಭ.ಒಟ್ಟಿನಲ್ಲಿ ಚರ್ಚೆಗೆನಿಲುಕದ ವಿಷಯವೇ ಅದ್ವೈತ. ಸಂಶೋಧನೆ ಒಳಗೇ ನಡೆದಂತೆಲ್ಲಾ ಮನಸ್ಸು ಶಾಂತವಾದರೆ ಸಾಧನೆ. ಹೊರಗೆ ನಡೆಸಿದರೆ ಮನಸ್ಸು ಗೊಂದಲಮಯ.
No comments:
Post a Comment