ಪಿತೃ ಪಕ್ಷದಲ್ಲಿ ಪಿತೃಕಾರ್ಯ ಮಾಡಿ
ಋಣ ತೀರಿಸಲಾಗುವುದಂತೆ. ನಮ್ಮ ಸನಾತನ ಧರ್ಮ ಸಂಸ್ಕಾರ,ಸಂಸ್ಕೃತಿ ಯ ಮೂಲ ಉದ್ದೇಶವೆ ಋಣ ತೀರಿಸಿ
ಮುಕ್ತಿ ಪಡೆಯುವುದಾಗಿದೆ. ಋಣ ಎಂದರೆ ಸಾಲ ಎಂದರ್ಥ.
ಪಿತೃಋಣ ತೀರಿಸದೆ ದೇವರ ಋಣ ತೀರಿಸಲಾಗದು ಎಂದು
ವೈದಿಕ ಪರಂಪರೆ ಹುಟ್ಟಿಕೊಂಡಿತು. ಆದರೆ, ಇದನ್ನು ಯಾವ
ರೀತಿಯಲ್ಲಿ ಎನ್ನುವ ಬಗ್ಗೆ ಈಗಲೂ ಚರ್ಚೆಗಳು ನಡೆದಿದೆ.
"ಉಳ್ಳವರು ಶಿವಾಲಯವ ಕಟ್ಟುವರು ನಾನೇನು ಮಾಡಲಿ
ಬಡವನಯ್ಯಾ" ಎಂದ ಹಾಗೆ ಪಿತೃಗಳ ಋಣವೂ ಮಕ್ಕಳು ತೀರಿಸಬೇಕಾದರೆ ಅವರು ಆಸ್ತಿ ಮಾಡಿರಬೇಕು. ಆಸ್ತಿ ಎಂದರೆ ಬೌತಿಕ ಜಗತ್ತಿನ ಆಸ್ತಿ ಎಂದಲ್ಲ.ಧಾರ್ಮಿಕ ಜಗತ್ತಿನ
ಆಸ್ತಿ ಮಾಡಿದವರ ಋಣ ಇದ್ದಾಗಲೆ ಸಂದಾಯವಾಗಿರುತ್ತದೆ.
ಆದರೂ ಮಕ್ಕಳಾದವರು ಅದನ್ನು ಶ್ರದ್ಧೆಯಿಂದ, ಭಕ್ತಿಯಿಂದ ತಿಳಿದು ಬೆಳೆಸಿಕೊಂಡು ಮುನ್ನೆಡೆದು ಇನ್ನಷ್ಟು ಜ್ಞಾನದಿಂದ ಸತ್ಕರ್ಮ ಮಾಡಿದರೆ ಸಾಲ ತೀರಿದಂತೆ. ಆದರೆ, ಇಲ್ಲಿ ಕೇವಲ ಬೌತಿಕ ಆಸ್ತಿಯನ್ನು ಬಳಸಿಕೊಂಡು ಅದೂ
ತನ್ನದೇ ಎನ್ನುವಂತೆ ಜೀವನ ನಡೆಸುವಾಗ,ಹಿಂದಿನ
ಹಿರಿಯರ ನಡೆ ನುಡಿಯಲ್ಲಿಅಡಗಿದ್ದ ಧರ್ಮ ಸತ್ಯ,ನ್ಯಾಯ,
ನೀತಿ ಅರ್ಥವಾಗುವುದಿಲ್ಲ.
ಎಲ್ಲಾ ಕಾಲಪ್ರಭಾವದ ಸುಳಿಯಲ್ಲಿ ಸಿಲುಕಿರುವಾಗ ಯಾರೂ
ಹೊರಬಂದು ಸತ್ಯ ತಿಳಿಯಲಾಗದು.ಕೊನೆಪಕ್ಷ ತಮ್ಮ ತಮ್ಮ
ಕಾಲು ಬುಡದ ಕೊಳಕನ್ನು ಸ್ವಚ್ಚ ಮಾಡಿಕೊಳ್ಳಲು ಪ್ರಯತ್ನ
ಪಟ್ಟರೆ ಸ್ವಚ್ಚಭಾರತ ಸಾಧ್ಯವಿದೆ. ಇದನ್ನು ಸರ್ಕಾರ ಮಾಡಲಿ
ಎಂದು ಬಿಟ್ಟರೆ ಕೆಸರಲ್ಲಿ ಅರಳುವ ಕಮಲವನ್ನು ಕೀಳಲು ಹೋಗಿ ಮೈಯೆಲ್ಲಾ ಕೆಸರಾಗಿಸಿಕೊಂಡ ಹಾಗೇ ಆಗುತ್ತದೆ.
"ಕೈ ಕೆಸರಾದರೆ ಬಾಯಿ ಮೊಸರು" ಮೈಯನ್ನೇ ಕೆಸರಲ್ಲಿಟ್ಟು
ರಾಜಕೀಯ ನಡೆಸಿದರೆ?
ತಮ್ಮ ತಮ್ಮ ಗುರು ಹಿರಿಯರ ಜ್ಞಾನವನ್ನು ಪ್ರತಿಭೆಯನ್ನು ಮಕ್ಕಳೊಳಗೆ ತಮ್ಮೊಳಗೇ ಬೆಳೆಸಿಕೊಂಡರೆ ಎಲ್ಲಿಯ ಋಣ?
ಅದು ಬಿಟ್ಟು ಅವರ ಪ್ರತಿಮೆಯಾಗಲಿ, ಚಿತ್ರಪಟವಾಗಲಿ ಇಟ್ಟು ಒಮ್ಮೆ ನೆನಿಸಿಕೊಂಡರೆ ವ್ಯರ್ಥ.
ಜ್ಞಾನದಿಂದ ಮಾತ್ರ ಋಣ ತೀರಿಸಲು ಸಾಧ್ಯ. ಅದೂ ಆಂತರಿಕ ಜ್ಞಾನಶಕ್ತಿಯನ್ನು ಬೆಳೆಸುವ ಶಿಕ್ಷಣದಿಂದ ಸಾಧ್ಯ. ಭೌತಿಕ ವಿಜ್ಞಾನವು ಒಂದೇ ಸ್ಥಿರವಾಗಿರದು. ಬದಲಾಗುವ ಅಸತ್ಯಕ್ಕಿಂತ ಬದಲಾಗದ ಸತ್ಯವೇ ದೇವರು. ಪಿತೃಗಳನ್ನು ದೇವರೆನ್ನುವ ನಮ್ಮ ಹಿಂದೂ ಧರ್ಮ ವು ಸನಾತನ ಕಾಲದ ಜ್ಞಾನದೊಳಗಿತ್ತು. ಈಗಿನ ವೈಜ್ಞಾನಿಕ ಚಿಂತನೆ ಇದನ್ನು ಒಪ್ಪದಿದ್ದರೂ ಸತ್ಯ ಅಸತ್ಯವಾಗದು. ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಎಂದರೆ ನಿಮ್ಮತನವನ್ನು ನೀವು ಉಳಿಸಿಕೊಳ್ಳಿ ಎಂದರ್ಥ. ಪಿತೃಗಳು ನಿಮಗಾಗಿ ಜೀವನ ನಡೆಸಿ ಹೋದರು. ನೀವು ಯಾರಿಗಾಗಿ ಜೀವನ ನಡೆಸಿದರೂ ನಿಮ್ಮತನುಮನಧನವು ಧರ್ಮದಲ್ಲಿ ಇದ್ದರೆ ಸಾಕು ಅದೇ ಮುಕ್ತಿ.
No comments:
Post a Comment