*ಕಗ್ಗ - 560*
ಜೀವನದ ಮೂಲ ಮೇಲಿಹುದು ಪರಮೋರ್ಧ್ವದಲಿ।
ತೀವಿರ್ಪುದದು ಕೆಳಗೆ ನಮ್ಮ ಲೋಕದಲಿ॥
ನಾವದರ ಕಡ್ಡಿಯೆಲೆ, ಚಿಗುರುವೆವು, ಬಾಡುವೆವು।
ಸಾವು ಮರಕೇನಿಲ್ಲ.
*- ಮಂಕುತಿಮ್ಮ.*
*ವಾಚ್ಯಾರ್ಥ,*
ಪರಮೋರ್ಧ್ವದಲಿ = ಪರಮ+ಊರ್ಧ್ವದಲಿ,
ತೀವಿರ್ಪುದದು = ತೀವಿ +ಇರ್ಪುದು+ಅದು,
ಕಡ್ಡಿಯೆಲೆ = ಕಡ್ಡಿ+ಎಲೆ,
ಮರಕೇನಿಲ್ಲ = ಮರಕೆ+ಏನೂ+ಇಲ್ಲ,
ಪರಮೋರ್ಧ್ವ = ಅತ್ಯಂತ ಎತ್ತರ,
ತೀವಿರ್ಪುದು = ತುಂಬಿಕೊಂಡಿದೆ, ವ್ಯಾಪಿಸಿದೆ,
*ಭಾವಾರ್ಥ:-*
ಜೀವನದ ಮೂಲ ಅಥವಾ ಅಧಾರ ಎಲ್ಲೋ ಮೇಲಿದೆ. ಅದು ಇರುವ ಸ್ಥಳ ಪರಮ ಊರ್ಧ್ವ. ಅದಕ್ಕಿಂತ ಮೇಲೆ ಯಾವುದೂ ಇಲ್ಲ. ಆದರೆ ಅದು ಜಗತ್ತಿನಲ್ಲಿ ಎಲ್ಲೆಲ್ಲೂ ಎಂದರೆ ನಮ್ಮ ಲೋಕದಲ್ಲೂ ವ್ಯಾಪಿಸಿಕೊಂಡಿದೆ. ನಾವುಗಳು ಈ ಜಗತ್ವೃಕ್ಷದ ಕಡ್ಡಿ ಮತ್ತು ಎಲೆಗಳು. ನಾವು ಒಣಗಿ ಬಾಡಿ ಉದುರಿದರೂ ಈ ಜಗತ್ವೃಕ್ಷಕ್ಕೆ ಸಾವು ಎಂಬುದು ಇರುವುದಿಲ್ಲ ಎಂದು ಸೃಷ್ಟಿಯ ಸೂಕ್ಷ್ಮತೆಯನ್ನು, ವ್ಯಾಪ್ತಿಯನ್ನು ಮತ್ತು ನಿರಂತರತೆಯನ್ನು ವಿಶ್ಲೇಸಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.
*ವ್ಯಾಖ್ಯಾನ,*
ಋಗ್ವೇದದ ಮೊದಲ ಸೂಕ್ತವೇ, ಪುರುಷಸೂಕ್ತ. ಈ ಜಗತ್ತಿನ ಸೃಷ್ಟಿ ಮತ್ತು ಸ್ವರೂಪವನ್ನು ವಿವರಿಸುವ ಸೂಕ್ತವಿದು.
*‘ಸ ಭೂಮಿಂ ವಿಶ್ವತೋ ವೃತ್ವಾ ಅತ್ಯತ್ ತಿಷ್ಟತ್ ದಶಾಂಗುಲಂ’*ಎಂದು ಹೇಳುವ ಈ ಸೂಕ್ತ, ಈ ಜಗತ್ತನ್ನು ಸೃಷ್ಟಿಸಿ, ಪೋಷಿಸಿ ಧಾರಣೆ ಮಾಡಿರುವ ಆ ಪರಮಶಕ್ತಿ ನಾವಿರುವಂತಹ ಲಕ್ಷಾಂತರ ಭೂಮಿಗಳನ್ನೂ ಸೇರಿ ಇಡೀ ವಿಶ್ವವನ್ನು ಆವರಿಸಿಕೊಂಡು, ಅದರ ಮೇಲೆ ಹತ್ತಂಗುಲದಲ್ಲಿ ನಿಂತಿದೆ ಎಂದು ಹೇಳುತ್ತದೆ. ಆದರೆ ಇದು ಹೇಳುವ ಆ ‘ಮೇಲೆ’ ಎನ್ನುವುದು ಎಷ್ಟು ಮೇಲಿದೆ ಎನ್ನುವುದು ನಮ್ಮ ಕಲ್ಪನೆಗೂ ನಿಲುಕದ ವಿಷಯ. ‘ನಾನು-ನಾವು’ ಎನ್ನುವ ನಾವುಗಳು ಈ ಜಗತ್ತೆಂಬ ಬೃಹತ್ ವೃಕ್ಷದ ಕೇವಲ ಒಂದು ಸಣ್ಣ ಎಲೆ ಅಥವಾ ಕಡ್ಡಿ. ಚಿಗುರಿ, ಪಲ್ಲವಿಸಿ, ಹೂತು, ಕಾತು, ಒಣಗಿ ಉದುರಿ ಹೋಗುವ ಎಲೆ ಅಥವಾ ಕಡ್ಡಿಗಳು. ಬಣ್ಣ, ಆಕಾರ, ಗಂಧ, ಅಥವಾ ರುಚಿಗಳು ಏನೇ ಇದ್ದರೂ ನಾವೆಲ್ಲಾ ಆ ಜಗತ್ತೆಂಬ ಅಶ್ವತ್ಥ ವೃಕ್ಷದ ಅಂಗಗಳು. ಒಂದು ಮರ ಪ್ರತೀ ಶಿಶಿರದಲ್ಲಿ ತನ್ನೆಲ್ಲ ಎಲೆಗಳನ್ನೂ ಕೊಡವಿಕೊಂಡು ಮತ್ತೆ ಹೊಸ ಚಿಗುರ ತಳೆಯುವಂತೆ ನಾವು ಎಷ್ಟು ಬಾರಿ ಹುಟ್ಟಿ ಬೆಳೆದು ನಾಶಗೊಂಡರೂ ಈ ವೃಕ್ಷ ಮಾತ್ರ ತನ್ನ ಹೊಸ ಹೊಸ ರೂಪಗಳನ್ನು ತಳೆಯುತ್ತಲೇ ಇರುತ್ತದೆ. ಇದು ಚಿರಾಯು ಶಾಶ್ವತ. ನಾವು ಕೇವಲ ಬಂದುಹೋಗುವ ಯಾತ್ರಿಕರಂತೆ. ಒಂದು ಬಾರಿ ಓದಿ ಈ ಮೇಲಿನ ವಿಷಯ ಮತ್ತು ತತ್ವವನ್ನು ತಿಳಿದುಕೊಂಡರೂ, ನಾನು ಎಂಬ ಮಮಕಾರದಿಂದ ಜಗತ್ತಿನ ವೈಶಾಲ್ಯದಲ್ಲಿ ನಮ್ಮ ಅತೀ ‘ಗೌಣ’ತೆ ನಮಗೆ ಅರ್ಥವಾಗುವುದೇ ಇಲ್ಲ. ಕೆಲಕಾಲ ತತ್ವ ಕಣ್ಣಿಗೆ ಕಂಡರೂ ವಿಷಯಾಸಕ್ತರಾದ ನಾವು, ಇಂದ್ರಿಯಲೋಲುಪರಾದ ನಾವು ಅಹಂಕಾರದಿಂದ ಮೆರೆಯುತ್ತೇವೆ. ನಮಗೆ ನಾವು ಯಾರೆಂದು ಅರಿವಾಗುವುದೇ ಇಲ್ಲ. ನಮ್ಮನ್ನು ನಾವು ನಮ್ಮ ಬುದ್ಧಿಯಿಂದಲೋ, ರೂಪದಿಂದಲೋ, ಗುರುತಿಗಾಗಿ ಇಟ್ಟ ಹೆಸರಿನಿಂದಲೋ ಗುರುತಿಸಿಕೊಳ್ಳುತ್ತೇವೆ. ಆದರೆ ನಮ್ಮ ನಿಜವಾದ ಗುರುತು ಆ ಪರಮ ಆತ್ಮನ ಒಂದು ಅಂಶವಾದ ‘ಆತ್ಮ’ವೆಂದು ಅರಿಯುವುದೇ ಇಲ್ಲ. ಹಾಗೆ ಆ ತತ್ವ ನಮ್ಮ ಹೃನ್ಮನಸ್ಸುಗಳಲ್ಲಿ ಸ್ಥಿರವಾದರೆ ಈ ಪ್ರಾಪಂಚಿಕ ಸುಖ ದುಃಖಗಳ ಪೀಡನೆಯಿಂದ ನಾವು ಖಂಡಿತ ಮುಕ್ತಿ ಹೊಂದಬಹುದು..🌹🙏
ಬ್ರಹ್ಮಾಂಡದ ರಹಸ್ಯಗಳನ್ನು ತಿಳಿದವನೊಬ್ಬನೇ ಪರಮಾತ್ಮ.ಇವನು ಒಳಗೂ ಹೊರಗೂ ಇದ್ದು ತನ್ನ ಕಾರ್ಯ ನಡೆಸಿರುವಾಗ ನಾನೆಂಬುದೇ ಇಲ್ಲ. ಹೀಗಿದ್ದೂ ನಾನು ಈ ಭೂಮಿಯನ್ನಾಗಲಿ ಆಕಾಶವನ್ನಾಗಲಿ ಪ್ರಕೃತಿಯನ್ನಾಗಲಿ ಆಳೋದಕ್ಕೆ ಹೊರಟರೆ ನನ್ನಂತೆಯೇ ಇತರರೂ ಜೊತೆಗೆ ಬರಬಹುದಷ್ಟೆ. ನಾನೇ ಅಜ್ಞಾನದ ಹಿಂದೆ ನಡೆದಿರುವಾಗ ಆ ಅಜ್ಞಾನಕ್ಕೆ ಸಹಕಾರ ಕೊಡುವವರಲ್ಲಿ ಎಷ್ಟು ಅಜ್ಞಾನವಿರಬಹುದು. ಅಜ್ಞಾನ ಬೆಳೆದಂತೆಲ್ಲಾ ನಾನು ಹೊರಗೆ ಬೆಳೆಯುತ್ತಾ ಒಳಗೆ ಅಹಂಕಾರ ಸ್ವಾರ್ಥ ವೆಂಬ ಅಸುರೀ ಶಕ್ತಿ ನನ್ನ ಆಳುವುದರ ಅರಿವಿಲ್ಲದೆ ಜೀವ ಹೋಗುತ್ತದೆ. ಆಗ ನಾನಿರೋದಿಲ್ಲ ಪರಮಾತ್ಮನೊಬ್ಬನೇ ಇರೋದು. ಭೂಮಿಯಲ್ಲಿ ಅಸುರೀ ಶಕ್ತಿ ಉಳಿಯುವುದು. ಸಹಕರಿಸಿದವರೂ ನನ್ನ ಮರೆತು ಹೋಗುವರು.ಇದಕ್ಕಾಗಿ ಸಾಕಷ್ಟು ಕಷ್ಟಪಟ್ಟು ಇಷ್ಟಪಟ್ಟು ಮಾಡಿದ ಹೋರಾಟದಿಂದ ಧರ್ಮ ಹಾಗು ಸತ್ಯ ರಕ್ಷಣೆಯಾಗಿದ್ದರೆ ಜೀವಕ್ಕೆಮುಕ್ತಿ. ಇದೇ ಕಾರಣಕ್ಕಾಗಿ ನಿಜವಾದ ಧರ್ಮ ರಕ್ಷಣೆಯಾಗೋದಕ್ಕೆ ಒಳಗಿನ ನಾನು ಹಿಂದುಳಿದು ನೀನೇ ಎಂದು ಶರಣಾಗೋದು ದಾಸನಾಗೋದು ಮಹಾತ್ಮನಾಗೋದು ಅಗತ್ಯ.ಇದೇ ಹಿಂದೂ ಧರ್ಮದ ಸತ್ಯ.ಎಲ್ಲಿ ಸತ್ಯವಿರುವುದೋ ಅಲ್ಲಿ ಧರ್ಮ ಕ್ಕೆ ಬೆಲೆಬರುವುದು. ಭೌತಿಕದ ಅರ್ಧ ಸತ್ಯದಲ್ಲಿ ಧರ್ಮ ದ ವ್ಯವಹಾರವಿದ್ದರೆ ಎಲ್ಲಿ ಹಣವಿರುವುದೋ ಅಲ್ಲಿ ಜನರಿರಬಹುದು.ಜನರೊಳಗೆ ಸತ್ಯಜ್ಞಾನವಿದೆಯೆ?ಮಿಥ್ಯ ಜ್ಞಾನವೇ ಅದನ್ನು ಜನರೆ ಪರೀಕ್ಷಿಸಿಕೊಂಡರೆ ಜೀವನದಲ್ಲಿ ಬದಲಾವಣೆ ಸಾಧ್ಯ.
ಮಾನವನಿಗೆ ಅಸಾಧ್ಯಯಾವುದೂ ಇಲ್ಲ. ಎತ್ತರಕ್ಕೆ ಏರಿದರೆ ಕೆಳಗಿಳಿದುಬರೋದೆ ಕಷ್ಟವಾದರೂ ಇಳಿಯಲೇಬೇಕಷ್ಟೆ. ಇದಕ್ಕೆ ಬದಲಾಗಿ ಕೆಳಗಿದ್ದೇ ಮೇಲಿನ ಸತ್ಯವನ್ನರಿತು ಜೀವನ ನಡೆಸಿದರೆ ಬೀಳುವ ಭಯವಿರದು. ಆದರೂ ಯಾವಾಗ ಹೇಗೆ ಮೇಲೆಕೆಳಗೆ ಆಡಿಸುವನೋ ಯಾರಿಗೂ ತಿಳಿಯದು.
ಹೀಗಾಗಿ ಕಾಲಚಕ್ರವನ್ನು ನಿಲ್ಲಿಸುವ ಶಕ್ತಿ ಮಾನವನಲ್ಲಿಲ್ಲ.
ಹುಟ್ಟು ಸಾವುಗಳನ್ನು ನಿರ್ಧಾರ ಮಾಡಲೂ ಸಾಧ್ಯವಿಲ್ಲ.
ಆದರೆ ಜೀವನದಲ್ಲಿ ಯಾವುದು ಶಾಶ್ವತ ಎನ್ನುವ ಜ್ಞಾನಗಳಿಸಲು ಅಡ್ಡಿಯಿಲ್ಲ.ಮನಸ್ಸಿರಬೇಕು. ಮನಸ್ಸಿದ್ದರೂ ಹಿಂದೆ ಗುರು ಹಿರಿಯರಿದ್ದರೆ ಸುಲಭ ಸಾಧ್ಯ ಅದೂ ಕೂಡ ವಿಧಿಲಿಖಿತ.
ಇಷ್ಟೆಲ್ಲಾ ಅಧ್ಯಾತ್ಮ ಸಂಶೋದನೆಯಿಂದ ಸದ್ವಿಚಾರ ಹೊರಗೆ ಬಂದರೂ ಮಾನವನಲ್ಲಿ ಯಾಕೆ ಸದ್ವಿಚಾರಕ್ಕೆ ಸಹಕಾರವಿಲ್ಲ ಎಂದರೆ ಭೌತಿಕ ವಿಜ್ಞಾನ ಅಧ್ಯಾತ್ಮ ವಿಜ್ಞಾನದಿಂದ ದೂರವಾಗಿ ಆತ್ಮಜ್ಞಾನದ ಕೊರತೆಯಿದೆ.
ಭೂಮಿ ಮೇಲಿರುವ ಸತ್ಯಕ್ಕೆ ಯಾವ ಸಂಶೋಧನೆಯ ಅಗತ್ಯವಿಲ್ಲ. ಆಕಾಶದೆತ್ತರ ಹಾರೋದಕ್ಕೆ ಸಂಶೋಧನೆ ಹೆಚ್ಚಾಗಿದೆ ಎಂದರೆ ಯಾವುದು ನಿಜವಾದ ಸಾಧನೆ? ಶಾಶ್ವತ ಯಾವುದು? ಧರ್ಮ ಯಾವುದು?
No comments:
Post a Comment