*ಕಗ್ಗ - 668*
ಬಡಗಿ ಬೇಸಾಯಿ ಕರ್ಮಿಗರೇನು ಯೋಗಿಗಳೊ..!।
ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ॥
ಬಿಡುವಿರದು ಬಣಗು ಚಿಂತೆಗೆ, ಬುತ್ತಿ ಹಂಗಿರದು।
ಕಡಿದಲ್ಲವರ್ಗೆ ಬಾಳ್.
*- ಮಂಕುತಿಮ್ಮ.*
*Translation.*
The carpenters, the farmers and other hard workers are fortunate and saints in their own way. All their mental energy is focused on the work at hand. They do not have any spare time for gossip, jealousy and other worries. They get returns for their work and don't have to depend on others for food. Life is not seem 'tough' for them.
*- Mankutimma.*
*ವಾಚ್ಯಾರ್ಥ,*
ಕರ್ಮಿಗರೇನು = ಕರ್ಮಿಗರು+ಏನು,
ಮುಡುಪವರ = ಮುಡುಪು+ಅವರ,
ಬಿಡುವಿರದು = ಬಿಡುವು+ಇರದು,
ಹಂಗಿರದು = ಹಂಗು+ಇರದು,
ಕಡಿದಲ್ಲವರ್ಗೆ = ಕಡಿದು+ಅಲ್ಲ,
ಅವರ್ಗೆಕರ್ಮಿಗರು = ಕುಶಲ ಕರ್ಮಿಗಳು,
ಮುಡುಪು = ಮೀಸಲು,
ಬುತ್ತಿ = ಊಟ,
ಕಡಿದು = ಕಷ್ಟತರವಾದದ್ದು.
*ಭಾವಾರ್ಥ:-*
ಬಡಗಿ, ರೈತ, ಕಮ್ಮಾರ, ಕುಂಬಾರ ಮುಂತಾದ ಕುಶಲ ಕರ್ಮಿಗಳೆಲ್ಲ ‘ಯೋಗ’ವನ್ನು ಕಲಿತವರೇನು..? ಅವರ ಜೀವನವೆಲ್ಲ ಮೈಬಗ್ಗಿಸಿ ಮಾಡುವ ದುಡಿತಕ್ಕೆ ಮೀಸಲಾಗಿರುತ್ತದೆ. ಬಿಡುವಿಲ್ಲದ ಕೆಲಸಕಾರ್ಯಗಳ ಮಧ್ಯೆ ಅವರಿಗೆ ವ್ಯರ್ಥ ಹರಟೆಗೆ ಸಮಯವಿರುವುದಿಲ್ಲ. ಅವರು ಸದಾ ದುಡಿದು ತಿನ್ನುವವರಾದ್ದರಿಂದ, ಅವರಿಗೆ ಯಾರ ಹಂಗೂ ಇರುವುದಿಲ್ಲ. ಅಂತಹವರಿಗೆ ಬಾಳು ದುರ್ಗಮವೆನಿಸುವುದಿಲ್ಲ..! ಎಂದು ‘ಕಾಯಕ’ದ ಮಹತ್ವವನ್ನು ಬಹಳ ಸುಂದರವಾಗಿ ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
*ವ್ಯಾಖ್ಯಾನ,*
ಅಂತಹ ಕುಶಲ ಕರ್ಮಿಗಳಿಗೆ ಅವರ ಕೆಲಸವೇ ಒಂದು ಯೋಗ. ಅವರು ಯೋಗಿಗಳಲ್ಲದಿದ್ದರೂ, ಯೋಗಿಗಳು. ಯೋಗವೆಂದರೆ
*‘ಚಿತ್ತವೃತ್ತಿ ನಿರೋಧಕ’* ಎಂದರೆ ಮನಸ್ಸನ್ನು ಹಲವಾರು ಕಡೆಗೆ ಹರಿದು ಹೋಗದಂತೆ ಇಟ್ಟುಕೊಳ್ಳುವುದೇ ‘ಯೋಗ’ ಇದೇ ರೀತಿ, ಕಮ್ಮಾರ, ಚಮ್ಮಾರ, ಬಡಗಿ, ಶಿಲ್ಪಿ, ಚಿತ್ರಕಾರ ಮುಂತಾದ ಕುಶಲ ಕರ್ಮಿಗಳು ತಮ್ಮ ವಿಧ್ಯೆಯನ್ನು ಕಲಿಯುವುದು ಒಂದು ‘ತಪಸ್ಸು’ ಜ್ಞಾನಾರ್ಜನೆಗೆ ಮನದಲ್ಲಿ ತಪಿಸುವುದೇ ‘ತಪಸ್ಸು’ ಅವರು ತಪಸ್ವಿಗಳು. ಹಾಗಾಗಿಯೇ ಅವರು ತಮ್ಮ ಏಕಾಗ್ರತೆಯಿಂದ ಸೃಷ್ಟಿಸುವ ‘ಕೃತಿ’ಗಳು ನೂರಾರು ಅಥವಾ ಸಾವಿರಾರು ವರ್ಷಗಳು ಸಮಾಜಕ್ಕೆ ಸಂತೋಷವನ್ನು ನೀಡುತ್ತದೆ. ಅವರ ಜೀವನವೆಲ್ಲ ಅಂತಹ ಕಲಾಕೃತಿಗಳ ಮೂಲಕ ಜಗತ್ತಿನ ಸಂತೋಷಕ್ಕಾಗಿಯೇ ಮುಡುಪಾಗಿಡುತ್ತಾರೆ. ಅವರಿಗೆ ವ್ಯರ್ಥಕಾಲಯಾಪನೆ ಮಾಡಲು ಸಮಯವೇ ಇರುವುದಿಲ್ಲ. ಅವರು ತಮ್ಮ ಆಹಾರವನ್ನು ತಾವೇ ಸಂಪಾದಿಸಿಕೊಳ್ಳುತ್ತಾರೆ. ಅವರು ಆಹಾರಕ್ಕಾಗಿ ಯಾರ ಹಂಗಿಗೂ ಬೀಳುವುದಿಲ್ಲ . ಅವರಿಗೆ ಬಾಳು ಕಷ್ಟಗಳ ಪ್ರಯಾಣವಾಗುವುದಿಲ್ಲ. ಹಾಗಾಗಿ ಯಾರೇ ಆಗಲಿ ತಮ್ಮ ಪಾಲಿಗೆ ಬಂದ ಕೆಲಸವನ್ನು ಕರ್ತವ್ಯವೆಂದು ಅರಿತು, ಒಪ್ಪಿಕೊಂಡು ತಮ್ಮನ್ನು ತಾವು ಸಂಪೂರ್ಣವಾಗಿ ಅದರಲ್ಲೇ ತೊಡಗಿಸಿಕೊಂಡರೆ, ಅದನ್ನೊಂದು ತಪ್ಪಸ್ಸೆಂದು ಆಚರಿಸಿದರೆ, ಆಗ ಯಾರಿಗೂ ವ್ಯರ್ಥವಾಗಿ ಕಾಲ ಕಳೆಯುವ ಅವಕಾಶವೇ ಸಿಗುವುದಿಲ್ಲ. ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡವರಿಗೆ, ಆ ಕೆಲಸವನ್ನು ಪೂರ್ಣಗೊಳಿಸಿದರೆ ಒಂದು ಸಂತೃಪ್ತ ಭಾವವಿರುತ್ತದೆ. ಒಬ್ಬ ಚಿತ್ರಕಾರನನ್ನೋ ಒಬ್ಬ ಶಿಲ್ಪಿಯನ್ನೋ ನಾವು ಗಮನಿಸಿದರೆ, ಅವರು ತಾವು ಸೃಷ್ಟಿಸಿದ ಕಲಾಕೃತಿಯನ್ನು ತಾವೇ ನೋಡಿ ನೋಡಿ ಆನಂದಿಸಿ ತೃಪ್ತರಾಗುವುದನ್ನು ಮತ್ತು ಅದು ಅನ್ಯರಿಗೆ ಸಂತಸವನ್ನಿತ್ತರೆ ಅನ್ಯರ ಸಂತೋಷವನ್ನು ಕಂಡು ಸಂತೋಷಪಡುವಂತಹ ಯೋಗಿಗಳು ಅವರು. ಅಂತಹವರಿಗೆ ಅನಾವಶ್ಯಕ ಮಾತು ಮತ್ತು ಕಾಡು ಹರಟೆಯಲ್ಲಿ ಯಾವ ಆಸಕ್ತಿಯೂ ಇರುವುದಿಲ್ಲ. ನಾವು ಯಾವುದೇ ಕೆಲಸವನ್ನು ಮಾಡುವಾಗಲೂ ಅಂತಹ ಮನೋಭಾವವನ್ನು ಬೆಳೆಸಿಕೊಂಡರೆ, ನಾವು ಮಾಡುವ ಕೆಲಸ ನಮಗೆ ತೃಪ್ತಿಯನ್ನು ನೀಡುತ್ತದೆ. ಆದರೆ ಇಂದಿನ ಸಮಾಜದ ಪರಿಸ್ಥಿತಿಯಲ್ಲಿ, ನಮ್ಮ ಮನಸ್ಸನ್ನು ಸೆಳೆಯುವ ನೂರಾರು ಸೆಳೆತಗಳ ಮಧ್ಯೆಯೂ ನಾವು ಅಂತಹ ಮನೋಭಾವವನ್ನು ಬೆಳೆಸಿಕೊಂಡು, ನಾವು ಮಾಡುವ ಕೆಲಸವನ್ನು ನಿಷ್ಥೆಯಿಂದ ಮಾಡಿ ತೃಪ್ತರಾದರೆ ನಮಗೂ ಸಹ ‘ಕಡಿದಲ್ಲವರ್ಗೆ ಬಾಳ್’ ಎಂದು ಗುಂಡಪ್ಪನವರು ಹೇಳುವಂತೆ ಬದುಕು ಸುಗಮವಾಗುತ್ತದೆ ಅಲ್ಲವೇ..?..
ವಾಟ್ಸಪ್ ಕೃಪೆ
ಕಗ್ಗ ಒಂದು ಕಗ್ಗಂಟು. ಆದರೆ ಆ ಗಂಟು ಬಿಚ್ಚಿದರೆ ಅದರೊಳಗಿರುವ ಜ್ಞಾನದ ಗಂಟು ಅರ್ಥ ವಾಗುತ್ತದೆ. ಅದರೊಳಗೆ ಹೊಕ್ಕಿ ನೋಡುವುದೇ ದೊಡ್ಡ ನಂಟು.
ಸಂಬಂಧ ಜೋಡಿಸುವ ಗಂಟನ್ನು ಕಟ್ಟಿಕೊಂಡರೆ ಜ್ಞಾನ
ಒಡೆಯುವ ಗಂಟನ್ನು ಕಟ್ಟಿದರೆ ಅಜ್ಞಾನ
ನೆಂಟರಿಷ್ಟರು ನಮ್ಮ ಒಗ್ಗಟ್ಟನ್ನು ಹೆಚ್ಚಿಸಬೇಕು ಒಡೆಯಬಾರದಷ್ಟೆ.
ಹಿಂದಿನ ಕಾಲದಲ್ಲಿ ತಮ್ಮ ಮೂಲ ಧರ್ಮ ಕರ್ಮಕ್ಕೆ ಚ್ಯುತಿ ಬರದಂತೆ ಜೀವನದಲ್ಲಿ ತತ್ವವಿತ್ತು ಸತ್ಯವಿತ್ತು. ಯಾವುದೇ ಸರ್ಕಾರಗಳಿಲ್ಲದೆಯೂ ಸ್ವತಂತ್ರವಾಗಿ ಜೀವನನಡೆಸುವ ಆತ್ಮಜ್ಞಾನವಿತ್ತು. ಕಾಲಾನಂತರದ ಶಿಕ್ಷಣದ ಅಂತರದಲ್ಲಿ ಇಂದಿಗೂ ಕಲೆ ಸಾಹಿತ್ಯ ಸಂಗೀತ ಇನ್ನಿತರ ವಿದ್ಯೆಗಳಿವೆ.
ಆದರೆ ಅಂದಿನ ತತ್ವವಿಲ್ಲದೆ ತಂತ್ರವೇ ಹೆಚ್ಚಾಗಿ ನಮ್ಮ ಆತ್ಮಸಂತೋಷಕ್ಕಾಗಿ ಜೀವನನಡೆಸಲಾಗದೆ ಪರಕೀಯರ ಸಂತೋಷಕ್ಕಾಗಿ ನಮ್ಮ ಜೀವನ ನಡೆದಿದೆ.ಕಾರಣ ನಮ್ಮೊಳಗೇ ಹೆಚ್ಚಾದ ಅಜ್ಞಾನದ ಅಹಂಕಾರ ಸ್ವಾರ್ಥ ಬುದ್ದಿವಂತಿಕೆ. ಜ್ಞಾನದಿಂದ ಆತ್ಮಶುದ್ದಿಯಾಗುತ್ತಿದ್ದ ಹಿಂದಿನ ಧರ್ಮ ಕ್ಕೂ ಆತ್ಮದುರ್ಭಲತೆ ಕಡೆಗೆ ನಡೆಯುತ್ತಿರುವ ಇಂದಿನ ಕರ್ಮ ಕ್ಕೂ ವ್ಯತ್ಯಾಸವೆಂದರೆ ಅಂದಿನಮಹಾತ್ಮರು ದೇಶದೊಳಗೆ ದೇವರೊಳಗೆ ನಾವಿದ್ದೇವೆಂಬ ಅರಿವಿನಲ್ಲಿ ಋಣ ತೀರಿಸುವ ಜ್ಞಾನಿಗಳಾಗಿದ್ದರು.ಈಗ ನಮ್ಮಿಂದಲೇ ದೇವರು ದೇಶವಿರೋದೆಂದು ಅಜ್ಞಾನದ ಅಹಂಕಾರ ಸ್ವಾರ್ಥ ಹೆಚ್ಚಾಗಿ ಸಾಲ ಮಾಡುತ್ತಾ ಹೊರದೇಶ ಉದ್ದಾರ ಮಾಡುತ್ತಿರುವುದು ಪರಧರ್ಮ ಎತ್ತಿಹಿಡಿದಿರೋದೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವೆಂದರೆ ವಿರೋಧಿಸುವುದೂ ನಮ್ಮವರೆ ಎಂದರೆ ಇದನ್ನು ಸರಿಪಡಿಸಲಾಗದು.
🌹🙏
No comments:
Post a Comment