ಎಲ್ಲಿಯವರೆಗೆ ಈ ದ್ವೇಷದ ದ್ವಂದ್ವದ ರಾಜಕೀಯ ಬಿಟ್ಟು ಮಾನವ ಸ್ವತಂತ್ರ ವಾಗಿ ನಡೆಯಲಾಗದೋ ಅಲ್ಲಿಯವರೆಗೆ ಮಾನವನಜೀವನವೇ ಅತಂತ್ರವಾಗಿರುತ್ತದೆ. ಇದು ಧಾರ್ಮಿಕ ಶೈಕ್ಷಣಿಕ ಕ್ಷೇತ್ರದವರೆಗೆ ಹರಡಿದೆ ಎಂದರೆ ದುರಂತ.
ಧರ್ಮದ ವಿಚಾರದಲ್ಲಿ ದ್ವೈತ ಅದ್ವೈತ ವಿಶಿಷ್ಟಾದ್ವೈತ ದ ಮೂಲಕ ಸಮಾನತೆಯನ್ನು ಸಾರಲು ಬಂದ ತತ್ವಜ್ಞಾನಿಗಳನ್ನು ಅರ್ಥ ಮಾಡಿಕೊಳ್ಳಲು ಸೋತವರು ಮಹಾ ಪಂಡಿತರಾದರು. ಆ ಪಾಂಡಿತ್ಯದಿಂದ ಸಾಕಷ್ಟು ಹಣ ಅಧಿಕಾರದ ಜೊತೆಗೆ ಜನಬಲವೂ ಸಿಕ್ಕಿತು .ಇದೇ ಮುಂದೆ ತಂತ್ರವಾಗಿ ಯಂತ್ರವಾಗಿ ಬದಲಾವಣೆ ಆಗಿ ಮಾನವಮಾನವನಿಗೇ ಶತ್ರುವಾದರೆ ಇದರಿಂದ ಮುಕ್ತಿ ಸಿಗುವುದೆ? ಹಿಂದೂ ಧರ್ಮದಲ್ಲಷ್ಟೇ ಶತ್ರುವನ್ನು ಪ್ರೀತಿಸು ಎಂದಿರುವುದು.ಅಂತಹಮಹಾ ಆತ್ಮಶಕ್ತಿ ಇರಬೇಕಾದರೆ ಪ್ರತಿಯೊಬ್ಬರಲ್ಲಿಯೂ ಅಡಗಿರುವ ಆ ಪರಮಾತ್ಮನ ಕಾಣಬೇಕು.ಪರಮಾತ್ಮ ಇರೋದು ತತ್ವಜ್ಞಾನದಲ್ಲಿ ತತ್ವವು ಒಂದು ಮಾಡಿದರೆ ತಂತ್ರ ಬೇರೆ ಮಾಡುತ್ತದೆ. ಸರಿ ಭೂಮಿಗಿಂತ ಆಕಾಶ ದೊಡ್ಡದಾದರೂ ಭೂಮಿ ಬಿಟ್ಟು ಮಾನವ ಆಕಾಶದಲ್ಲಿ ಜೀವನ ನಡೆಸಬಹುದೆ? ಮೊದಲು ಭೂಮಿಯ ಸತ್ಯ,ಸತ್ವ,ತತ್ವವರಿತರೆ ನಂತರ ಆಕಾಶದೆತ್ತರ ಮನಸ್ಸು ಹಾರಬಹುದು.ದೇಹವನ್ನು ಹೊತ್ತಿರುವಜೀವಾತ್ಮ
ಪರಮಾತ್ಮನೆಡೆಗೆ ಸಾಗೋದಕ್ಕೆ ದೇಹ ಶುದ್ದವಾಗಿರಬೇಕು.
ಸ್ವಚ್ಚ ಭಾರತವೆಂದು ಪೊರಕೆ ಹಿಡಿದು ಗುಡಿಸಿದರೆ ಒಳಗಿನ ಕಲ್ಮಶ ಹೋಗುವುದಿಲ್ಲ.ಇದಕ್ಕೆ ಮುಖ್ಯವಾಗಿ ಬೇಕಾಗಿರೋದು ಸ್ವಚ್ಚ ಶಿಕ್ಷಣ ಪದ್ದತಿ.ಆತ್ಮಶುದ್ದಿ ಇಲ್ಲದೆ ದೇಹ ಶುದ್ದಿ ಮಾಡಿದರೂ ಹೊರಗಿನಿಂದ ಶುದ್ದವಾಗಿ ಕಾಣುವ ನಾಟಕವಷ್ಟೆ. ಇಲ್ಲಿ ಯಾರನ್ನೂ ಯಾರೋ ಶುದ್ದಿಮಾಡಲು ಕಷ್ಟ.ನಮ್ಮನ್ನು ನಾವು ಶುದ್ದವಾಗಿಟ್ಡುಕೊಳ್ಳಲು ಜ್ಞಾನವೇ ಬಂಡವಾಳ.ಅದು ಸತ್ಯಶುದ್ದವಾಗಿರಬೇಕು. ನಿಸ್ವಾರ್ಥ ನಿರಹಂಕಾರದಿಂದ ಪ್ರತಿಫಲ ಅಪೇಕ್ಷೆಯಿಲ್ಲದೆ ನಡೆಸುವ ಕರ್ಮವಾಗಿರಬೇಕು.ಸೇವೆಯಾಗಿರಬೇಕು.ದಾನದಿಂದ ಆತ್ಮತೃಪ್ತಿ ಹೊಂದುತ್ತದೆ ಎಂದರೆ ಎತ್ತ ಸಾಗುತ್ತಿದೆ ಭಾರತ?
ವಿದೇಶಿಗಳನ್ನು ಶುದ್ದ ಗೊಳಿಸುವುದಿರಲಿ ಸ್ವದೇಶದವರಲ್ಲಿದ್ದ ಶುದ್ದ ಹೃದಯವಂತರನ್ನು ಆಳಿ ಅಳಿಸುವ ರಾಜಕೀಯತೆ ಧಾರ್ಮಿಕ ಕ್ಷೇತ್ರವನ್ನೂ ಬಿಡದೆ ಆವರಿಸಿದೆ.ಧರ್ಮ ಶಿಕ್ಷಣ ದೇಶದ ಪ್ರಜೆಗಳಿಗೆ ಕೊಡುವುದು ಧಾರ್ಮಿಕ ಕ್ಷೇತ್ರದ ಧರ್ಮ.
ಎಲ್ಲಿದೆ? ಬಡವರನ್ನು ಹಿಂದುಳಿಸುತ್ತಾ ಶ್ರೀಮಂತ ಜನರನ್ನು ಸ್ವಾಗತಿಸುತ್ತಾ ಹಣ,ಆಸ್ತಿ ಅಂತಸ್ತು ಬೆಳೆದಿದ್ದರೂ ಒಳಗಿನ ತತ್ವದೆಡೆಗೆ ನಡೆಯಲಾಗದ ತಂತ್ರವೇ ಧರ್ಮ ರಕ್ಷಣೆ ಮಾಡಲು ಹೊರಟಿದೆ.
ಇದರ ಪರಿಣಾಮವೇ ಪರಕೀಯರ ಪರಧರ್ಮದವರ ಪ್ರವೇಶ. ಅವರಿಗಾದರೂ ಮೂಲಸತ್ಯದೆಡೆಗೆ ಹೋಗುವಷ್ಟು ಜ್ಞಾನವಿಲ್ಲ. ಹೀಗಾಗಿ ಮೇಲಿನ ಕಣ್ಣಿಗೆ ಕಾಣುವ ಈ ದ್ವೇಷ ದ್ವಂದ್ವಗಳನ್ನು ತಮ್ಮ ಸ್ವಾರ್ಥ ಕ್ಕೆ ಬಳಸಿಕೊಂಡು ಜನಸಂಖ್ಯೆ ಹೆಚ್ಚಿಸಿಕೊಳ್ಳಲು ಹೊರಟರು.ಜನಸಂಖ್ಯೆ ಬೆಳೆಸಿದರೆ ಪ್ರಗತಿಯಾಗದು.ಜ್ಞಾನ ಬೆಳೆಸಬೇಕಿದೆ. ಸತ್ಯ ಒಂದೇ ಆ ಸತ್ಯದ ಕಡೆಗೆ ಎಲ್ಲಾ ಒಂದಾಗಿ ನಡೆಯುವುದೇ ಕಷ್ಟ.ಹೀಗಾಗಿ ನಮ್ಮ ಮಹಾತ್ಮರುಗಳು ರಾಜಕೀಯ ಬಿಟ್ಟು ಸ್ವತಂತ್ರ ವಾಗಿ ಆ ಪರಮಸತ್ಯದೆಡೆಗೆ ನಡೆದರು.
ಪುರಾಣ ಇತಿಹಾಸದಿಂದಲೂ ಈ ರಾಜಕೀಯವಿದೆ.ಆದರೆ ಅಂದು ಧರ್ಮ ಶಿಕ್ಷಣವಿತ್ತು.ರಾಜರಲ್ಲಿ ಧಾರ್ಮಿಕ ಜ್ಞಾನಶಕ್ತಿ ಇತ್ತು.ಜನರನ್ನು ಸ್ವತಂತ್ರವಾಗಿ ಜೀವನ ನಡೆಸಲು ಅವಕಾಶ ಮಾಡಿಕೊಡಲಾಗಿತ್ತು.ಈಗಿನಂತೆ ಮತಬೇಟೆ ಮಾಡುವ ಪ್ರಜಾಪ್ರಭುತ್ವ ಇರಲಿಲ್ಲ. ಮತದಾನದ ಅರ್ಥ ವೇ ತಿಳಿಯದ ಅಮಾಯಕರನ್ನು ಆಳುವುದರಿಂದ ಏನಾದರೂ ಸಾಧನೆ ಮಾಡಿದ್ದೇವೆಂದರೆ ಇದೊಂದು ಪ್ರಜಾಪ್ರಭುತ್ವಕ್ಕೆ ಅವಮಾನ.
ಒಟ್ಟಿನಲ್ಲಿ ಎಲ್ಲಾ ಕ್ಷೇತ್ರದಲ್ಲೂ ಭ್ರಷ್ಟಾಚಾರ ಹೆಚ್ಚಾಗಿದೆ.ಇಲ್ಲಿ ಭ್ರಷ್ಟಾಚಾರ ಎಂದರೆ ಅಸತ್ಯ ಅನ್ಯಾಯ,ಅಧರ್ಮದ ಆಚಾರ,ವಿಚಾರ,ಪ್ರಚಾರ.,ಶಿಕ್ಷಣವೇ ಇದರ ಮೂಲವಾಗಿದೆ.ನಮ್ಮದಲ್ಲದ್ದನ್ನು ನಮ್ಮದೆಂದು ಪಡೆಯುವುದು ಭ್ರಷ್ಟಾಚಾರ. ಹಾಗಾದರೆ ತತ್ವವಿಲ್ಲದ ತಂತ್ರದ ಶಿಕ್ಷಣದಿಂದ ಸ್ವತಂತ್ರ ಸಿಕ್ಕಿತೆ? ಇದು ಭಾರತೀಯರಿಗಷ್ಟೆ ಸೀಮಿತವಲ್ಲ ವಿದೇಶಿಗಳಿಗೂ ತತ್ವಜ್ಞಾನದಿಂದ ಸ್ವತಂತ್ರ ಜೀವನ ಎನ್ನುವ ಅಧ್ಯಾತ್ಮ ಎಲ್ಲಾ ರೀತಿಯಿಂದಲೂ ಅಗತ್ಯ.
ತನ್ನ ತಾನು ಆಳಿಕೊಳ್ಳಲು ಬೇಕಾದ ಜ್ಞಾನ ಬಿಟ್ಟು ಪರರನ್ನು ಆಳುವ ಅಜ್ಞಾನವೇ ಆತ್ಮಹತ್ಯೆ ಗೆ ಕಾರಣ. ಒಳಗಿರುವಸತ್ಯ ಬಿಟ್ಟು ಹೊರಗಿರುವ ತಾತ್ಕಾಲಿಕ ಸತ್ಯವನ್ನು ಬೆಳೆಸಿದರೆ ಅಸತ್ಯವೇ ಆಳುವುದು.ಒಳಗಿದ್ದ ದೈವತ್ವ ಮರೆತು ಹೊರಗಿನ ಅಸುರರಿಗೆ ಮಣೆ ಹಾಕಿದರೆ ಅಸುರರೆ ಅತಿಥಿಗಳಾಗಿದ್ದು ತಿಥಿ ಮಾಡುವರು. ಹೀಗೇ ಇದನ್ನು ಸರಿಪಡಿಸಲು ಹೊರಗಿನ ರಾಜಕೀಯದಿಂದ ಅಸಾಧ್ಯ.ಒಳಗಿರುವ ರಾಜಯೋಗದಿಂದ ಸಾಧ್ಯವಿದೆ. ಆದರೆ ಮನಸ್ಸನ್ನು ಒಳಗೆ ಸೇರಿಸಿಕೊಳ್ಳಲು ನಮ್ಮ ಪ್ರಯತ್ನವಿರಬೇಕಿದೆ.ಹೊರಗಿನ ರಾಜಕೀಯ ಮನಸ್ಸನ್ನು ಹಾಳುಮಾಡಿ ದ್ವೇಷ ತುಂಬಿರುವಾಗ ಇದರಿಂದ ಬಿಡುಗಡೆ ಪಡೆಯುವುದಕ್ಕೆ ಎಷ್ಟು ಜನ್ಮ ಬೇಕೋ.ಈ ಜನ್ಮದಲ್ಲಿ ಅಂತಹ ದಾರಿಯಲ್ಲಿ ನಡೆಯುತ್ತಿರುವವರ ಹಿಂದೆ ನಡೆದರೆ ಉತ್ತಮ .ಒಟ್ಟಿನಲ್ಲಿ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದಂತೆ ದೇಶದೊಳಗೆ ಸೇರಿಕೊಂಡಿರುವ ಹಲವಾರು ಧರ್ಮ, ದೇಶ,ಜಾತಿ, ದೇವರು ದೇಶವನ್ನು ಒಂದು ಮಾಡುವ ಬದಲು ಒಡೆದು ತಮ್ಮ ತಮ್ಮ ಸ್ವಾರ್ಥ ದ ಬೇಳೆಬೇಯಿಸಿಕೊಂಡರೂ ಇದಕ್ಕೆ ತಕ್ಕಂತೆ ಪ್ರತಿಫಲ ಕೊಡುವ ಮೇಲಿರುವ ಆ ಮಹಾ ಶಕ್ತಿ ಒಬ್ಬಳೆ. ಪರಮಾತ್ಮನಿಂದಲೂ ಸರಿಪಡಿಸಲಾಗದ್ದು ಪರಾಶಕ್ತಿ ಸರಿಪಡಿಸಬಹುದು.
ಈಗ ರಾಜ್ಯದ ಚುನಾವಣೆಯ ಫಲಿತಾಂಶವೇ ಅತಂತ್ರಸ್ಥಿತಿಗೆ
ತಲುಪಿದೆ ಎಂದರೆ ನಾವೆಲ್ಲರೂ ಎಷ್ಟು ಸ್ವತಂತ್ರರು?
ಪ್ರಜಾಪ್ರಭುತ್ವ ದೇಶದೊಳಗೆ ಸ್ವಾತಂತ್ರ್ಯ ಸ್ವೇಚ್ಚಾಚಾರದೆಡೆಗೆ ನಡೆದಿದೆ ಎಂದರೆ ಇದಕ್ಕೆ ತಂತ್ರದ ರಾಜಕೀಯವೇ ಕಾರಣ.
ಯಾರೂ ಸ್ವತಂತ್ರ ರಲ್ಲ. ಎಲ್ಲಾ ಅತಂತ್ರರೆ.ಇದಕ್ಕೆ ನಮ್ಮದೆ ಸಹಕಾರ ಕಾರಣವಾಗಿದ್ದರೆ ಉತ್ತಮ ವಿಚಾರಕ್ಕೆ ಸಹಕಾರ ಕೊಡುವುದಷ್ಟೆ ಇರುವ ಮಾರ್ಗ.
ಮತದಾನದ ಅರ್ಥ ತಿಳಿಯದವರಷ್ಟೆ ಮತಬೇಟೆಗೆ ಸಹಕಾರ ಕೊಟ್ಟು ತಮ್ಮ ಸ್ವಾತಂತ್ರ್ಯ ಕಳೆದುಕೊಳ್ಳಲು ಸಾಧ್ಯ.ಇದಕ್ಕೆ ಕಾರಣವೇ ಅಜ್ಞಾನದ ಶಿಕ್ಷಣ.
ದೇಶದೊಳಗೆ ಸೇರಿಕೊಂಡಿರುವ ಅಸುರಶಕ್ತಿ ದೇಶದ ಭೌತಿಕ ಸಂಪತ್ತನ್ನು ಲೂಟಿಹೊಡೆದರೂ ಜ್ಞಾನ ಸಂಪತ್ತನ್ನು ಲೂಟಿ ಮಾಡಲಾಗದು. ಸ್ವತಂತ್ರ ಜೀವನಕ್ಕೆ ಬೇಕಾದ ಜ್ಞಾನದ ಶಿಕ್ಷಣ ಸ್ವದೇಶದದ್ದಾದರೆ ದೇಶರಕ್ಷಣೆ ಧರ್ಮ ರಕ್ಷಣೆ ಸಾಧ್ಯವಿತ್ತು.
ವಿಪರ್ಯಾಸವೆಂದರೆ ಪ್ರಚಾರಕರಿಗೇ ಆಳವಾಗಿರುವ ಸತ್ಯದ ಅರಿವಿಲ್ಲದೆ ಮಕ್ಕಳನ್ನು ಹೊರಜಗತ್ತಿನಲ್ಲಿ ಬಿಡುತ್ತಿರುವುದು ಹಿಂದೂ ಸನಾತನ ಧರ್ಮದ ಹಿಂದುಳಿಯುವಿಕೆಗೆ ಕಾರಣ. ಹಣದಿಂದ ಜ್ಞಾನೋದಯವಲ್ಲ
ಜ್ಞಾನದಿಂದ ಹಣಸಂಪಾದನೆಯಾಗಿತ್ತು.ಅದೂ ತತ್ವಜ್ಞಾನದ ನಂತರ ತಂತ್ರಜ್ಞಾನದ ಶಿಕ್ಷಣವಿತ್ತು. ಮನುಕುಲ ತನಗೆ ತಾನೇ ಮೋಸಹೋದರೆ ಪರಮಾತ್ಮನಾದರೂ ಏನು ಮಾಡಿಯಾನು.ಅವನೊಳಗಿರುವ ಜೀವಾತ್ಮರು ಅವರವರ ಹಿಂದಿನ ಋಣ ಕರ್ಮಕ್ಕೆ ತಕ್ಕಂತೆ ಜನ್ಮ ಪಡೆದು ಮರೆಯಾಗುವುದು ಜಗತ್ತಿನ ನಿಯಮ. ಬದಲಾವಣೆಯು ಶಿಕ್ಷಣದಲ್ಲಾಗಬೇಕಿತ್ತು. ಕೆಲವೆಡೆ ನಡೆದರೂ ಅದೂ ಭ್ರಷ್ಟರ ಹಣದಲ್ಲಿ ನಡೆದಿದ್ದರೆ ಪೂರ್ಣಫಲವಿಲ್ಲ. ಮೂಲ ಸ್ವಚ್ಚವಾಗಿದ್ದರೆ ರೆಂಬೆಗಳು ಗಟ್ಟಿಯಾಗಿರುತ್ತದೆ.ಕಲಿಗಾಲ ಕಲಿಸುತ್ತದೆ.ಯಾವುದನ್ನು ಕಲಿತರೆ ಆತ್ಮತೃಪ್ತಿ ಸಿಗುತ್ತದೆ. ಯಾವುದರಿಂದ ಆತ್ಮಹತ್ಯೆ ಆಗುತ್ತದೆ ಎನ್ನುವ ಜ್ಞಾನ ಅಗತ್ಯ.
ಇದು ಎಲ್ಲರೊಳಗಿದೆ ಹೊರಗಿಲ್ಲ.ಹೊರಗೆ ಬಂದಷ್ಟೂ ಕಷ್ಟ ನಷ್ಟ. ಇನ್ನಾದರೂ ಭಾರತೀಯರಾಗಿ ಚಿಂತನೆ ನಡೆಸಿದರೆ ಭಾರತೀಯ ತತ್ವಜ್ಞಾನದ ಅರ್ಥ ಎಲ್ಲರಲ್ಲಿಯೂ ಅಡಗಿರುವ ಜ್ಞಾನವನ್ನು ಜೋಡಿಸಿಕೊಂಡು ದೇಶದ ಪ್ರಗತಿಗಾಗಿ ಕಷ್ಟಪಟ್ಟು ದುಡಿಯುವುದಾಗಿದೆ. ಜನಸೇವೆಯೇ ಜನಾರ್ದನನ ಸೇವೆ,ದೇಶಸೇವೆ ಈಶಸೇವೆ, ಕಾಯಕವೇ ಕೈಲಾಸ.ಈ ಮಂತ್ರದಲ್ಲಿರುವ ನಿಸ್ವಾರ್ಥ ನಿರಹಂಕಾರದ ಭಕ್ತಿಯೋಗ ಅಗತ್ಯವಾಗಿದೆ. ದೇವರ ಭಕ್ತರು ದೇಶಭಕ್ತರಾದರೆ ಉತ್ತಮ. ದ್ವೇಷ ಬೆಳೆಸಿದರೆ ಅಧಮ.
ಅಧರ್ಮ.
ಸಾಮಾನ್ಯಪ್ರಜೆಯಾಗಿದ್ದು ಸಾಮಾನ್ಯಜ್ಞಾನವನ್ನು ಅರ್ಥ ಮಾಡಿಕೊಳ್ಳಲು ರಾಜಕೀಯ ಬೇಡ. ಮನೆಯೊಳಗೆ ಇದ್ದು ತನ್ನ ಆತ್ಮರಕ್ಷಣೆ ಮಾಡಿಕೊಳ್ಳಲು ಸ್ವತಂತ್ರ ಜ್ಞಾನವಿರಬೇಕಷ್ಟೆ.
ಇಂದು ಮನೆ ಮನೆಯೊಳಗೆ ಹರಡುತ್ತಿರುವ ಈ ದ್ವೇಷದ ಕಿಡಿ ಇಡೀ ದೇಶ ಹತ್ತಿ ಉರಿಯುವಂತೆ ಮಾಡಿರುವುದೆ ಮಾಧ್ಯಮಗಳು. ಮಧ್ಯವರ್ತಿಗಳು, ಅರ್ಧ ಸತ್ಯದ ಪ್ರಚಾರಕರು,ಮಾನವರು,ಮಹಿಳೆಯರು, ಮಕ್ಕಳು.
ಈ 'ಮ' ಮಧ್ಯದ ಅಕ್ಷರ 'ಅ' ಎನ್ನುವ ಮೊದಲ ಅಕ್ಷರವಾದ ಅಧ್ಯಾತ್ಮ ಬಿಟ್ಟು' ಜ್ಞ' ಎನ್ನುವ ಕೊನೆಯನ್ನು ತಲುಪಲಾರದ ಅತಂತ್ರಸ್ಥಿತಿಗೆ ಜೀವ ತಂದಿಟ್ಟಿದೆ.
ಸತ್ಯವಿಲ್ಲದ ಧರ್ಮ ಕುಂಟುತ್ತಿದೆ, ಧರ್ಮವಿಲ್ಲದ ಭೌತಿಕ ಸತ್ಯ ಕುರುಡರನ್ನು ಸೃಷ್ಟಿ ಮಾಡುತ್ತಿದೆ.
No comments:
Post a Comment