ಹೆಸರು ಮಾಡಬೇಕೆಂದರೆ ಹಣವಿರಬೇಕು, ಹಣಮಾಡಬೇಕೆಂದರೆ ಕಷ್ಟಪಟ್ಟು ದುಡಿಯಬೇಕು, ಕಷ್ಟಪಟ್ಟಷ್ಟೂ ಜ್ಞಾನ ಬರುತ್ತದೆ. ಜ್ಞಾನ ಬಂದ ಮೇಲೆ ಹೆಸರಿನ ಹಿಂದೆ ಹೋಗುವ ಮನಸ್ಸಾಗದು. ಮನಸ್ಸಿಲ್ಲದ ಮೇಲೆ ಹೆಸರೂ ಮಾಡಲಾಗದು.ಹೆಸರು ಮಾಡದವರನ್ನು ಜನರು ಗುರುತಿಸರು. ಜನರು ಗುರುತಿಸದಿರುವ ಜ್ಞಾನಿಗಳಿಂದ ಲೋಕ ರಕ್ಷಣೆ ಆಗಬಹುದೆ? ಒಂದನ್ನು ಬಿಟ್ಟು ಇನ್ನೊಂದು ಇಲ್ಲ.
ಹಾಗೆ ಪರಮಾತ್ಮನಿಲ್ಲದೆ ಜೀವಾತ್ಮನಿಲ್ಲ, ಜೀವಾತ್ಮನಿಲ್ಲದೆ ಪರಮಾತ್ಮನ ಗುರುತಿಸುವವರಿಲ್ಲ. ಭೂಮಿಯಲ್ಲಿ ಧರ್ಮ ರಕ್ಷಣೆ ಮಾಡಲು ಪರಮಾತ್ಮನ ಅವತಾರವಾದಂತೆ ಅವನ ಸಹಕಾರಕ್ಕೆ ಜೀವಾತ್ಮರೂ ನಿಂತಾಗಲೇ ಧರ್ಮ ರಕ್ಷಣೆ. ಇಲ್ಲ ಜೀವಾತ್ಮರಿಂದಲೇ ಧರ್ಮ ರಕ್ಷಣೆ ಎನ್ನುವವರು ಬೆಳೆದರೆ ಪರಮಾತ್ಮನ ಸಹಕಾರವಿದ್ದರೂ ನಾನೇ ದೇವರೆನ್ನುವ ಅಹಂ
ತನ್ನ ಹೆಸರನ್ನು ಬೆಳೆಸಿಕೊಳ್ಳಲು ಮುಂದಾಗಿ ನಾನು ನಾನೇ ಆದಾಗ ನಾನೆಂಬುದಿಲ್ಲ ನಾನು ಹೆಸರಿಗಷ್ಟೆ ಎನ್ನುವ ಸತ್ಯದ ಅರಿವಾಗದೆ ಜೀವ ಹೋಗುತ್ತದೆ. ಹೀಗಾಗಿ ಸಾಕಷ್ಟು ಜ್ಞಾನಿಗಳು ಅವರ ಹೆಸರಿಗಾಗಿ ಜೀವನ ನಡೆಸದೆ ಅವರ ತತ್ವಜ್ಞಾನದಿಂದ ಹೆಸರುಗಳಿಸಿದ್ದರು. ಹೆಸರುವಾಸಿಯಾದವರೆಲ್ಲರೂ ಜ್ಞಾನಿಗಳಾಗಿಲ್ಲ.
ಜ್ಞಾನಿಗಳಾದವರೆಲ್ಲರೂ ಹೆಸರಿಗಾಗಿ ವಾಸವಾಗಿರಲಿಲ್ಲ. ಹೀಗಾಗಿ ಈಗ ನಾವು ಹೆಸರುವಾಸಿಗಳ ಹಿಂದೆ ನಡೆಯೋ ಮೊದಲು ಅವರಲ್ಲಿನ ಜ್ಞಾನವನ್ನು ಅರ್ಥ ಮಾಡಿಕೊಂಡರೆ ನಮ್ಮ ಹೆಸರಿಗೂ ಚ್ಯುತಿ ಬರದಂತೆ ಜೀವನ ನಡೆಸಬಹುದು. ಶಾಶ್ವತವಾಗಿರುವ ಜ್ಞಾನದಿಂದ ಹೆಸರು ಬರುವುದಕ್ಕೂ, ಅಜ್ಞಾನದಿಂದ ಹೆಸರುಗಳಿಸುವುದಕ್ಕೂ ವ್ಯತ್ಯಾಸ ವಿಷ್ಟೆ. ಒಂದು ರಾಜಯೋಗ ಇನ್ನೊಂದು ರಾಜಕೀಯ. ರಾಜಯೋಗದಿಂದ ಧರ್ಮ ರಕ್ಷಣೆ ಸಾಧ್ಯ.
ರಾಜಕೀಯದಿಂದ ಅಧರ್ಮದ ದ್ವೇಷವೇ ಬೆಳೆದಿದೆ,
ಬೆಳೆಯುತ್ತಿದೆ,ಬೆಳೆಯುತ್ತದೆ ಎನ್ನುವ ಕಾರಣಕ್ಕಾಗಿ ಮಹಾತ್ಮರುಗಳು ಹೆಸರಿಗಾಗಿ ಯಾವುದೇ ಅಧ್ಯಾತ್ಮ ಸಾಧನೆ ಮಾಡಲಿಲ್ಲ. ಹೆಸರುಗಳಿಸಿದವರ ಜ್ಞಾನ, ಹೆಸರುಗಳಿಸದಿರುವ ಜ್ಞಾನವೆಲ್ಲವೂ ಒಂದೇ ಆಗಿದ್ದರೂ ಜನ ಗುರುತಿಸುವುದಕ್ಕೆ ಹೆಸರಿನ ಅಗತ್ಯವಿದೆ ಎಂದ ಮಾತ್ರಕ್ಕೆ ನಮ್ಮ ಹೆಸರಿನಿಂದ ಎಲ್ಲಾ ನಡೆಯುತ್ತದೆಯೆ? .
ದೇಶದ ಪ್ರಶ್ನೆ ಬಂದಾಗ ಹೊರಗಿನಿಂದ ಬಂದವರು ಹೆಸರು ಮಾಡಿದರೆ ಅವರನ್ನು ಬೆಳೆಸುವುದು ಅಜ್ಞಾನ.ಹಾಗೆಯೇ ಒಳಗಿರುವವರು ಹೆಸರಿಗಾಗಿ ಹೋರಾಟನಡೆಸಿದರೂ ಅಜ್ಞಾನ. ಮಧ್ಯವರ್ತಿಗಳು ಹೆಚ್ಚು ಸಹಕರಿಸುವುದು ಹೆಸರು ಮಾಡಿದವರಿಗಷ್ಟೆ.ಹಾಗಾಗಿ ಅಜ್ಞಾನವನ್ನು ಎಲ್ಲೆಡೆಯೂ ಹರಡಿಕೊಂಡು ವ್ಯವಹಾರದ ರಾಜಕೀಯದಲ್ಲಿ ಹೆಸರು ಸಿಲುಕಿ ನಿಜವಾದ ಸತ್ಯ ಹಿಂದುಳಿದಿದೆ. ಸತ್ಯಕ್ಕೆ ಹೆಸರು ಇರುವುದೆ? ಒಂದೇ ಹೆಸರು ಸತ್ಯ ಯಾವತ್ತೂ ಸತ್ಯವಾಗಿರುತ್ತದೆ.ಮಿಥ್ಯಕ್ಕೆ ನಾನಾ ಹೆಸರುಗಳಿವೆ. ಒಂದೆಡೆ ನಿಂತು ಸತ್ಯ ಕಂಡುಕೊಳ್ಳಲು ಕಷ್ಟವಾಗಿ ನಾನಾ ಕಡೆ ತಿರುಗಿ ಹೆಸರು ಮಾಡುವ ಮಾನವನಿಗೆ ತನ್ನ ಹೆಸರೇ ತನಗೆ ಮೋಸ ಮಾಡುತ್ತಿರುವ ಸತ್ಯಜ್ಞಾನವಿದ್ದರೆ ಉತ್ತಮ ಬದಲಾವಣೆ ಸಾಧ್ಯ.
ವಿಶ್ವವಿಖ್ಯಾತಿಯಾಗೋದಕ್ಕೆ ವಿಶ್ವ ಮಟ್ಟದ ಹೆಸರುಗಳಿಸಬೇಕು. ವಿಶ್ವೇಶ್ವರನ ತಿಳಿಯುವುದಕ್ಕೆ ಆಂತರಿಕ ಅರಿವು ಇರಬೇಕು. ಇವೆರಡರ ಮಧ್ಯೆ ನಿಂತು ಹೆಸರು ಮಾಡಿ ಹೋದವರೆ ಮಾನವರು. ಮಧ್ಯವರ್ತಿ ಮಾನವ ಆಟಕ್ಕುಂಟು ಲೆಕ್ಕಕ್ಕಿಲ್ಲದ ಕಾರಣಮಾತ್ರದ ಜೀವಾತ್ಮನಾಗಿ ಪರಮಾತ್ಮನ ಹೆಸರಿನಲ್ಲಿ ತನ್ನ ಜೀವನ ನಡೆಸುವಾಗ ನನ್ನ ಹೆಸರಿನಲ್ಲೇನಿದೆ ?
ಇತ್ತೀಚೆಗೆ ಬಹಳಷ್ಟು ಜನರಿಗೆ ಹೆಸರು ಮಾಡುವ ಆಸೆ.ಆದರೆ ಇದಕ್ಕೆ ಅಂತ್ಯವಿಲ್ಲ. ಆದರೆ ನಮ್ಮ ಜೀವನಕ್ಕೆ ಅಂತ್ಯವಿದೆ. ಹಾಗಾಗಿ ಎಲ್ಲರ ಹೆಸರಿನಲ್ಲಿ ಅಡಗಿರುವ ಪರಮಾತ್ಮನ ಕಂಡರೆ ಉತ್ತಮ. ಇಲ್ಲಿ ಯಾರೂ ದೇವರಲ್ಲ.ಆದರೆ ಎಲ್ಲರಲ್ಲಿಯೂ ದೇವ ಗುಣವಿದೆ. ಹಾಗೆ ಅಸುರರೂ ಅಲ್ಲ.ಎಲ್ಲರಲ್ಲಿಯೂ ಅಸುರಗುಣವಾದ ಅಹಂಕಾರ ಸ್ವಾರ್ಥ ಮಿತಿಮೀರಿದರೆ ಅಸುರರೆ ಹೆಚ್ಚು ಹೆಸರುಗಳಿಸುವುದಲ್ಲವೆ? ನಮ್ಮ ಸಹಕಾರ ಯಾರಿಗೆ ಕೊಟ್ಟರೆ ನಮ್ಮ ಹೆಸರಿಗೆ ಬೆಲೆ ಬರುತ್ತದೆ? ಸಾಮಾನ್ಯ ಜ್ಞಾನವಿದ್ದವರು ಉತ್ತರಿಸಬಹುದು. ಕಾರಣ ಇಲ್ಲಿ ದೇವತೆಗಳೂ ಅಸುರರೂ ತಮ್ಮ ಹೆಸರಿಗಾಗಿ ಜನರನ್ನು ದುರ್ಭಳಕೆ ಮಾಡಿಕೊಂಡು ಆಳುತ್ತಿರುವಾಗ ಯಾರು ದೇವರೆನ್ನುವ ಸತ್ಯ ನಮ್ಮ ಸಾಮಾನ್ಯಜ್ಞಾನದಿಂದಲೇ ತಿಳಿಯಬಹುದು.ಒಟ್ಟಿನಲ್ಲಿ ಯಾರೂ ಶಾಶ್ವತವಲ್ಲ.ಇನ್ನು ಹೆಸರು ಶಾಶ್ವತವೆ?
ಮುಂದಿನ ಜನ್ಮದಲ್ಲಿ ನಾನೇ ಮಾಡಿಕೊಂಡ ಹೆಸರಿಗೆ ನಾನೇ ಗೌರವಿಸದಿರಬಹುದು.ಕಾರಣ ಅದು ಭ್ರಷ್ಟಾಚಾರದ ಮಾರ್ಗ ಆಗಿದ್ದರೆ ವ್ಯರ್ಥ ವಾಗಿರುತ್ತದೆ.
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದಂತೆ.
ಭೂಮಿಯಲ್ಲಿ ಜೀವನನಡೆಸುವುದಕ್ಕೆ ದೇಹಕ್ಕೆ ಒಂದು ಹೆಸರಿನ ಅಗತ್ಯವಿದೆ.ಆದರೆ ಅದರ ಒಳಗಿರುವ ಆತ್ಮನಿಗೆ ಹೆಸರಿದೆಯೆ? ಸತ್ಯವೇ ದೇವರೆಂದರೆ ಸತ್ಯಕ್ಕೆ ಒಂದೇ ಹೆಸರು.ಭೂಮಿಗೆ ಒಂದೇ ಹೆಸರು,ದೇಶಕ್ಕೆ ಒಂದೇ ಹೆಸರು ಆ ಹೆಸರನ್ನು ಉಳಿಸುವುದೇ ನಿಜವಾದ ಧರ್ಮ .
No comments:
Post a Comment